ಬೆಂಗಳೂರು: ಬೆಲೆಬಾಳುವ ಕ್ಯಾಮೆರಾಗಳನ್ನು ಬಾಡಿಗೆ ಪಡೆದು, ಮಾಲೀಕರಿಗೆ ವಾಪಸ್ ಕೊಡದೆ ಓಎಲ್ ಎಕ್ಸ್ ನಲ್ಲಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಅರೋಪದಡಿ ಐಐಎಂ ಪದವೀಧರನನ್ನು ಪೊಲೀಸರು ಬಂಧಿಸಿದ್ದಾರೆ.
27 ವರ್ಷದ ಎಂಬಿಎ ಪದವೀಧರ ಕಾರ್ತಿಕ್ ಅಡ್ಡಗರ್ಲಾ (25) ಎಂಬಾತನನ್ನು ಬಂಧಿಸಿರುವ ಪೊಲೀಸರು ಸುಮಾರು 12 ಲಕ್ಷ ರು ಮೌಲ್ಯದ ಉಪಕರಣಗಳನ್ನು ವಶ ಪಡಿಸಿಕೊಂಡಿದ್ದಾರೆ.
ವಿಶಾಖಪಟ್ಟಣ ನಿವಾಸಿಯಾದ ಕಾರ್ತಿಕ್, ಮೂರು ವರ್ಷಗಳ ಹಿಂದೆ ಪದವಿ ಪೂರ್ಣಗೊಳಿಸಿದ್ದ. ನಂತರ, ಮನೆ ತೊರೆದು ನಗರದಿಂದ ನಗರಕ್ಕೆ ಸುತ್ತಾಡುತ್ತಿದ್ದ. ಗಾಂಧಿನಗರದ ವಸತಿ ಗೃಹದಲ್ಲಿರುವಾಗಲೇ ಸಿಕ್ಕಿಬಿದ್ದಿದ್ದಾನೆ.
ಸ್ಥಳೀಯ ನಿವಾಸಿ ಲೋಹಿತ್ ಸೊಂಟಕಿ ಎಂಬುವವರು, 2.76 ಲಕ್ಷ ಮೌಲ್ಯದ ಕ್ಯಾಮೆರಾ ಹಾಗೂ 1.38 ಲಕ್ಷ ಮೌಲ್ಯದ ಲೆನ್ಸ್ ಬಾಡಿಗೆಗೆ ಕೊಡುವುದಾಗಿ ‘ರೆಂಟ್‌ಶೇರ್ ಡಾಟ್ ಕಾಮ್’ ಜಾಲತಾಣದಲ್ಲಿ ಜಾಹೀರಾತು ಪ್ರಕಟಿಸಿದ್ದರು. ಅದನ್ನು ನೋಡಿ ಲೋಹಿತ್‌ರನ್ನು ಸಂಪರ್ಕಿಸಿದ್ದ ಆರೋಪಿ, ಕ್ಯಾಮೆರಾ, ಲೆನ್ಸ್ ಬಾಡಿಗೆಗೆ ಪಡೆದಿದ್ದ. ನಿಗದಿತ ದಿನ ಕಳೆದರೂ ಅವುಗಳನ್ನು ವಾಪಸ್ ಕೊಟ್ಟಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ಆ ಬಗ್ಗೆ ಲೋಹಿತ್ ದೂರು ನೀಡಿದ್ದರು ಎಂದರು.
ಆರೋಪಿಯ ತಂದೆ, ವಾಯುಪಡೆಯ ನಿವೃತ್ತ ಅಧಿಕಾರಿ. ತಾಯಿ ಸಹ ಬ್ಯಾಂಕೊಂದರ ನಿವೃತ್ತ ಉದ್ಯೋಗಿ. ಪದವಿ ಮುಗಿಸಿದ ಬಳಿಕ ಕಾರ್ತಿಕ್‌ಗೆ ಕೆಲಸ ಸಿಕ್ಕಿರಲಿಲ್ಲ. ಅವನ ಈ ಕೃತ್ಯಗಳು ತಿಳಿದ ಮೇಲೆ ಪೋಷಕರು ಆತನನ್ನು ಮನೆಯಿಂದ ಹೊರ ಹಾಕಿದ್ದರು.
‘ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಆರೋಪಿ ಸುತ್ತಾಡುತ್ತಿದ್ದ. ಪಂಚತಾರಾ ಹೋಟೆಲ್‌ಗಳಲ್ಲೇ ನಿತ್ಯವೂ ಉಳಿದುಕೊಳ್ಳುತ್ತಿದ್ದ’ ಎಂದರು.ಪದವಿ ಓದುತ್ತಿದ್ದಾಗಿನಿಂದಲೂ ಆರೋಪಿ ಜೂಜಾಟ ಆಡುತ್ತಿದ್ದ. ಪರೀಕ್ಷಾ ಶುಲ್ಕ ಪಾವತಿಸಬೇಕೆಂದು ಪೋಷಕರಿಂದ ಪದೇ ಪದೇ ಹಣ ಪಡೆದುಕೊಂಡು ಜೂಜಾಟಕ್ಕೆ ಬಳಸುತ್ತಿದ್ದ. ಆ ಬಗ್ಗೆ ಆರೋಪಿಯೇ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಬಾಡಿಗೆ ಪಡೆದ ಕ್ಯಾಮೆರಾ ಹಾಗೂ ಲೆನ್ಸ್‌ಗಳ ಚಿತ್ರಗಳನ್ನು ಕ್ಲಿಕ್ಕಿಸಿ ‘ಓಎಲ್‌ಎಕ್ಸ್’ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದ. ಗ್ರಾಹಕರು ಸಿಗುತ್ತಿದ್ದಂತೆ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಮುಂಬೈ ಪಶ್ಚಿಮ ಠಾಣೆ, ಗೋರೆಗಾಂವ್ ಠಾಣೆ, ಪಶ್ಚಿಮ ಬಂಗಾಳದ ಹೌರಾ ಠಾಣೆ, ಹೈದರಾಬಾದ್‌ನ ಹುಮಾಯೂನ್ ನಗರ ಠಾಣೆ, ಬಂಜಾರ ಹಿಲ್ಸ್ ಠಾಣೆ ವ್ಯಾಪ್ತಿಯಲ್ಲೂ ಕ್ಯಾಮೆರಾ ಮಾಲೀಕರನ್ನು ಆರೋಪಿ ವಂಚಿಸಿದ್ದಾನೆ.
Comments are closed.