ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮುನ್ನಡೆಗೆ ತೊಡಕಾಗಿದ್ದ ಖಾತೆ ಹಂಚಿಕೆ ಹಗ್ಗಜಗ್ಗಾಟಕ್ಕೆ ಶುಕ್ರವಾರ ಸಂಜೆ ಅಲ್ಪವಿರಾಮ ಬಿದ್ದಿದೆ. ಪತ್ರಿಕಕಾಗೋಷ್ಠಿಯಲ್ಲಿ ಮಾತನಾಡಿದ ವೇಣುಗೋಪಾಲ್ ಖಾತೆ ಹಂಚಿಕೆಯ ವಿವರಗಳನ್ನು ಬಹಿರಂಗಪಡಿಸಿದರು.
ಭಾರೀ ಜಟಾಪಟಿಗೆ ಕಾರಣವಾಗಿದ್ದ ಹಣಕಾಸು, ಲೋಕೋಪಯೋಗಿ ಮತ್ತು ಇಂಧನ ಇಲಾಖೆಗಳನ್ನು ತನ್ನ ಸುಪರ್ದಿಯಲ್ಲಿಯೇ ಇರಿಸಿಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಇಂಧನ ಖಾತೆಗೆ ಪಟ್ಟು ಹಿಡಿದಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ವರಿಷ್ಠರು ಹೇಗೆ ಸಮಾಧಾನಪಡಿಸುತ್ತಾರೋ ಕಾದುನೋಡಬೇಕು.
ಕಾಂಗ್ರೆಸ್ ಪಾಳಯಕ್ಕೆ ಸಿಕ್ಕಿರುವ ಖಾತೆಗಳಲ್ಲಿ ಗೃಹ, ನೀರಾವರಿ ಮತ್ತು ಬೆಂಗಳೂರು ನಗರ ಅಭಿವೃದ್ಧಿ ಇಲಾಖೆಗಳು ಪ್ರತಿಷ್ಠಿತ ಎನಿಸಿಕೊಂಡಿವೆ.
ಸರ್ಕಾರ ಮತ್ತು ಪಕ್ಷಗಳ ನಡುವೆ ತಲೆದೋರಬಹುದಾದ ಭಿನ್ನಾಭಿಪ್ರಾಯ ಪರಿಹರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಮಿತಿಯ ಸದಸ್ಯರು. ಡ್ಯಾನಿಶ್ ಅಲಿ ಸಂಚಾಲಕರಾಗಿರುತ್ತಾರೆ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ತಿಳಿಸಿದರು.
ಎಲ್ಲ ನಿಗಮ ಮತ್ತು ಮಂಡಳಿಗಳ ನೇಮಕಾತಿ ಪ್ರಕ್ರಿಯೆಯನ್ನು ಸಮನ್ವಯ ಸಮಿತಿ ಅಂತಿಮಗೊಳಿಸಬೇಕು. ಈ ನೇಮಕಾತಿಗಳಲ್ಲಿ ಕಾಂಗ್ರೆಸ್‌ಗೆ ಮೂರನೇ ಎರಡು (2/3) ಮತ್ತು ಜೆಡಿಎಸ್‌ಗೆ ಮೂರನೇ ಒಂದು (1/3) ಪಾಲು ಸಿಗಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಗ್ಗೂಡಿ ಸೆಣೆಸಲಿವೆ ಎಂದು ಅವರು ಘೋಷಿಸಿದರು.
ಕೋಮುಸೌಹಾರ್ದ, ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿಗೆ ಮೈತ್ರಿ ಸರ್ಕಾರ ಆದ್ಯತೆ ಕೊಡಲಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಐದು ವರ್ಷ ಆಡಳಿತ ಪೂರ್ಣಗೊಳಿಸಲಿದ್ದಾರೆ ಎಂದು ನುಡಿದರು.
ಕಾಂಗ್ರೆಸ್ ಪಕ್ಷಕ್ಕೆ ಹಂಚಿಕೆಯಾದ ಖಾತೆಗಳು:
ಗೃಹ, ಜಲಸಂಪನ್ಮೂಲ, ಕೈಗಾರಿಕೆ ಮತ್ತು ಸಕ್ಕರೆ ಇಲಾಖೆ, ನೀರಾವರಿ, ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ವಿಜ್ಞಾನ ಮತ್ತು ತಂತ್ರಜ್ಞಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆರೋಗ್ಯ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ, ಸಮಾಜ ಕಲ್ಯಾಣ, ಅರಣ್ಯ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ. ಕಾರ್ಮಿಕ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ, ಬಂದರು, ಒಳನಾಡು ಸಾರಿಗೆ ಇಲಾಖೆ,
ಜೆಡಿಎಸ್ ಪಕ್ಷಕ್ಕೆ ಹಂಚಿಕೆಯಾದ ಖಾತೆಗಳು:
ಇಂಧನ, ಸಹಕಾರ, ಹಣಕಾಸು, ಅಬಕಾರಿ, ಉನ್ನತ ಶಿಕ್ಷಣ, ಲೋಕೋಪಯೋಗಿ, ಪ್ರವಾಸೋದ್ಯಮ, ಪಶುಸಂಗೋಪನೆ, ಸಾರಿಗೆ, ಸಣ್ಣ ಕೈಗಾರಿಕೆ, ಡಿಪಿಎಆರ್, ಗುಪ್ತಚರ ಇಲಾಖೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ, ತೋಟಗಾರಿಕೆ, ರೇಷ್ಮೆ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ.
ಬುಧವಾರ ಮಧ್ಯಾಹ್ನ ಪ್ರಮಾಣವಚನ:
ಎರಡೂ ಪಕ್ಷಗಳ ನಿರ್ಧಾರದಂತೆ ಬುಧವಾರ ಮಧ್ಯಾಹ್ನ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಟ್ಟು 22 ಖಾತೆಗಳು ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಜೆಡಿಎಸ್ ಗೆ 15 ಖಾತೆಗಳು ಸಿಕ್ಕಿವೆ.
Comments are closed.