ಕರಾವಳಿ

ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ಮಂಗಳೂರಿನ ನಾರಾಯಣ ಪೈ ರಾಜ್ಯಕ್ಕೆ ದ್ವಿತೀಯ ಸ್ಥಾನ

Pinterest LinkedIn Tumblr

ಮಂಗಳೂರು, ಜೂನ್.1: ಮಂಗಳೂರಿನ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿ ನಾರಾಯಣ ಪೈ ಅವರು ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಡೊಂಗರಕೇರಿ ನಿವಾಸಿ, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಡಿವಿಶನಲ್ ಮ್ಯಾನೇಜರ್ ಸುರೇಂದ್ರ ಪೈ ಹಾಗೂ ಶ್ರೀಮತಿ ಸುಧಾ ಪೈ ದಂಪತಿಯ ಪುತ್ರನಾಗಿರುವ ನಾರಾಯಣ ಪೈ ಅವರು ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸುವ ಮೂಲಕ ತಾವು ಕಲಿತ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಇವರ ಈ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿರುವ ಶಾರದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯು ನಾರಾಯಣ ಪೈ ಅವರನ್ನು ಅಭಿನಂದಿಸಿದೆ. ಶಾರದ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪ್ರೋ.ಎಂ.ಬಿ.ಪುರಾಣಿಕ್, ಸಂಚಾಲಕ ದಯನಂದ್ ಕಟೀಲ್ ಹಾಗೂ ಕಾಲೇಜಿನ ಇತರ ಸಿಬ್ಬಂದಿ ವರ್ಗ ನಾರಾಯಣ ಪೈ ಅವರಿಗೆ ಸಿಹಿ ತಿನ್ನಿಸಿ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ವೇಳೆ ಉಪಸ್ಥಿತರಿದ್ದ ತಾಯಿ ಸುಧಾ ಪೈ ಅವರು ಮಗನ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ, ಆತ ಕಷ್ಟಪಟ್ಟು ಓದುತ್ತಿದ್ದ. ಹಾಗಾಗಿ ಒಳ್ಳೆಯ ಅಂಕ ಪಡೆಯುವ ನಿರೀಕ್ಷೆ ಇತ್ತು. ಇದೀಗ ದ್ವಿತೀಯ ರ್‍ಯಾಂಕ್ ಬಂದಿರುವುದು ನಮಗೆಲ್ಲಾ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.

ಎನ್‌ಐಟಿಕೆಯಲ್ಲಿ ಇಂಜಿನಿಯರಿಂಗ್ ಗುರಿ :

ಶಾರದಾ ಕಾಲೇಜಿನಲ್ಲಿ ವ್ಯಸಂಗ ಮಾಡುತ್ತಿರುವ ನಾರಾಯಣ ಪೈ ಅವರು ಈಗಾಗಲೇ ಜೆಇಇ ಮೇನ್ ಪರೀಕ್ಷೆಯಲ್ಲೂ ಕಾಲೇಜಿಗೆ ಟಾಪರ್ ಆಗಿದ್ದು, ಎಂಐಟಿಯಲ್ಲಿ 4ನೇ ರ್‍ಯಾಂಕ್ ಪಡೆದಿದ್ದಾರೆ.10ನೇ ವರೆಗೆ ಎಕ್ಕೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಸಿಬಿಎಸ್‌ಇ 10ನೇ ತರಗತಿಯಲ್ಲೂ ನಾರಾಯಣ ಪೈ 10 ಸಿಜಿಪಿಇ ಅಂಕಗಳನ್ನು ಪಡೆದಿದ್ದರು.

ಇದೀಗ ಸಿಇಟಿಯ ಇಂಜಿನಿಯರಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುವ ನಾರಾಯಣ ಪೈ ಅವರು ಮುಂದೆ ಎನ್‌ಐಟಿಕೆಯಲ್ಲಿ ಇಂಜಿನಿಯರಿಂಗ್ ಅಧ್ಯಯನ ಮಾಡಲು ನಿರ್ಧರಿಸಿದ್ದು, ‘ನನಗೆ ಭೌತಶಾಸ್ತ್ರದ ಬಗ್ಗೆ ಹೆಚ್ಚಿನ ಆಸಕ್ತಿ. ಉಳಿದಂತೆ ನಾನು ದಿನನಿತ್ಯದ ಪಾಠಗಳನ್ನು ಅಂದೇ ಓದುತ್ತಿದ್ದೆ. ಮುಂದೆ ಎನ್‌ಐಟಿಕೆಯಲ್ಲಿ ಇಂಜಿನಿಯರಿಂಗ್ ಅಧ್ಯಯನ ಮಾಡಲು ನಿರ್ಧರಿಸಿದ್ದೇನೆ” ಎಂದು ತಿಳಿಸಿದ್ದಾರೆ.

Comments are closed.