ಉಡುಪಿ: ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ (62) ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಮೇ.29ರ ರಾತ್ರಿ ಭಜರಂಗದಳದ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಹುಸೈನಬ್ಬ ಪೊಲೀಸ್ ಜೀಪಿನಲ್ಲಿ ಮೃತಪಟ್ಟಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಂಬಂಧ ಹಿರಿಯಡ್ಕ ಎಸ್ಸೈ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
(ಮೃತಪಟ್ಟ ಹುಸೇನಬ್ಬ)
ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ (ಎಸ್.ಐ) ಡಿ.ಎನ್.ಕುಮಾರ್, ಹೆಡ್‌ಕಾನ್‌ಸ್ಟೇಬಲ್ (ಎಚ್.ಸಿ) ಮೋಹನ್ ಕೊತ್ವಾಲ್, ಠಾಣಾ ಜೀಪು ಚಾಲಕ ಗೋಪಾಲ್, ಹಾಗೂ ಬಜರಂಗದಳದ ಕಾರ್ಯಕರ್ತರಾದ ಪೆರ್ಡೂರು ಪಕಾಲು ನಿವಾಸಿ ಚೇತನ್ ಯಾನೆ ಚೇತನ್ ಆಚಾರ್ಯ (22), ಪೆರ್ಡೂರು ಅಲಂಗಾರು ನಿವಾಸಿ ಶೈಲೇಶ್ ಶೆಟ್ಟಿ (20), ಪೆರ್ಡೂರು ಕೆನ್ನೆತ್‌ಬೈಲುವಿನ ಗಣೇಶ್ ನಾಯ್ಕ(24) ಬಂಧಿತ ಆರೋಪಿಗಳಾಗಿದ್ದಾರೆ.
(ಹಿರಿಯಡ್ಕ ಎಸ್.ಐ ಡಿ.ಎನ್.ಕುಮಾರ್, ಹೆಡ್‌ಕಾನ್‌ಸ್ಟೇಬಲ್ ಮೋಹನ್ ಕೊತ್ವಾಲ್)
ಪೊಲೀಸ್ ಜೀಪಿನಲ್ಲೇ ಹುಸೇನಬ್ಬ ಸಾವು…
ಬಜರಂಗದಳದ ಕಾರ್ಯಕರ್ತರು ಹಾಗೂ ಹಿರಿಯಡ್ಕ ಪೊಲೀಸರು ಶೇನರಬೆಟ್ಟು ಎಂಬಲ್ಲಿ ಬೆಳಗ್ಗೆ 4ಗಂಟೆಗೆ ಅಕ್ರಮ ದನ ಸಾಗಾಟದ ವಾಹನಕ್ಕಾಗಿ ಕಾದು ನಿಂತಿದ್ದು, ಈ ವೇಳೆ ಶೇನರಬೆಟ್ಟು ಕಡೆಯಿಂದ ಪೆರ್ಡೂರು ಕಡೆಗೆ ಬರುತ್ತಿದ್ದ ಸ್ಕಾರ್ಪಿಯೋ ವಾಹನವನ್ನು ಆರೋಪಿಗಳು ಪೊಲೀಸರ ಸಮಕ್ಷಮದಲ್ಲಿ ತಡೆದಿದ್ದರು. ಈ ಸಂದರ್ಭ ವಾಹನದಲ್ಲಿದ್ದ ಇಬ್ಬರು ಓಡಿ ಹೋಗಿದ್ದು, ಹುಸೈನಬ್ಬ ಗುಂಪಿನ ಕೈಗೆ ಸಿಕ್ಕಿ ಬಿದ್ದಿದ್ದರು. ಈ ವೇಳೆ ಬಜರಂಗದಳ ಕಾರ್ಯಕರ್ತರು ಸ್ಕಾರ್ಪಿಯೋ ದ್ವಂಸಗೊಳಿಸಿ ಹುಸೈನಬ್ಬರಿಗೆ ಹಲ್ಲೆ ನಡೆಸಿದರು. ಬಳಿಕ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿ ದರು. ಅಲ್ಲಿಂದ ಪೊಲೀಸರು ಹುಸೈನಬ್ಬರನ್ನು ಇಲಾಖಾ ಜೀಪಿನಲ್ಲಿ ಹಾಗೂ ದನ ಸಾಗಾಟ ಮಾಡಿದ ಸ್ಕಾರ್ಪಿಯೋ ವಾಹನವನ್ನು ಸುರೇಶ್ ಮೆಂಡನ್ ಹಾಗೂ ಇತರ ಆರೋಪಿಗಳು ಠಾಣೆಗೆ ತಂದಿದ್ದರು. ಆಗ ಜೀಪಿನ ಹಿಂಬದಿ ಕುಳಿತಿದ್ದ ಹುಸೈನಬ್ಬ ಮೃತಪಟ್ಟಿದ್ದರು.
ಪೊಲೀಸ್ ಜೀಪಿನಲ್ಲೇ ಶವ ರವಾನೆ!
ನಂತರ ಪೊಲೀಸರು ಠಾಣೆಗೆ ಬಂದಿದ್ದ ಬಜರಂಗದಳದ ಕಾರ್ಯಕರ್ತರಾದ ಪ್ರಸಾದ್ ಕೊಂಡಾಡಿ ಹಾಗೂ ಇತರರೊಂದಿಗೆ ಸೇರಿ ಮೃತದೇಹವನ್ನು ಕೃತ್ಯ ನಡೆದ ಸ್ಥಳದಿಂದ ಸುಮಾರು ಒಂದು ಕಿ.ಮೀ. ದೂರ ಇಟ್ಟು ಬಂದಿದ್ದರೆಂದು ತನಿಖೆಯಿಂದ ತಿಳಿದು ಬಂದಿದೆ. ನಂತರ ಬೆಳಗ್ಗೆ 9.45ರ ಸುಮಾರಿಗೆ ಹುಸೈನಬ್ಬ ದನದ ವಾಹನವನ್ನು ತಡೆಗಟ್ಟಿದ ಸಮಯ ಓಡಿ ತಪ್ಪಿಸಿಕೊಂಡು ಭಯದಿಂದ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರಬಹುದೆಂದು ಪೊಲೀಸರು ಅಸಹಜ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
(ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ)
ಈ ಪ್ರಕರಣದಲ್ಲಿ ಭಾಗಿಯಾಗಿರುವ ಹಿರಿಯಡ್ಕ ಎಸ್ಸೈ ಹಾಗೂ ಇತರ ಪೊಲೀಸರು ವಿಚಾರಣೆ ವೇಳೆ ಘಟನೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಅದರಂತೆ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ. ಈ ಹಿಂದೆಯೇ ಎಸ್ಸೈಯನ್ನು ಅಮಾನತು ಮಾಡಲಾಗಿತ್ತು.
ಎಸ್ಪಿ ಲಕ್ಷ್ಮಣ್ ನಿಅಂಬರಗಿ ಅವರ ನಿಸ್ಪಕ್ಷಪಾತ ತನಿಖೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಾರೀ ಪ್ರಶಂಸೆ ವ್ಯಕ್ತವಾಗಿದೆ.
Comments are closed.