ಕರಾವಳಿ

ಮೋದಿ ಭಯದಿಂದ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಅಪವಿತ್ರ ಮೈತ್ರಿ : ಶಾಸಕ ಸಿ.ಟಿ.ರವಿ ಲೇವಡಿ

Pinterest LinkedIn Tumblr

ಮಂಗಳೂರು, ಜೂನ್.4: ದೇಶದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಮೋದಿ ಭಯ, ಮೋದಿ ಜ್ವರ ಶುರುವಾಗಿದೆ. ಅದಕ್ಕಾಗಿ ಜನಾದೇಶ ಕಳೆದುಕೊಂಡ ಕಾಂಗ್ರೆಸ್ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ರಾಜ್ಯದ ಜನತೆ ಹಸಿದ ಜೆಡಿಎಸ್ ಹಾಗೂ ಹಳಸಿದ ಕಾಂಗ್ರೆಸ್ ಮೈತ್ರಿ ಸರಕಾರವನ್ನು ನೋಡುವಂತಾಗಿದೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಾಗಲಕೋಟೆ ಹೊರತುಪಡಿಸಿ ಬಿ ಯಿಂದ ಆರಂಭವಾಗುವ ಇತರ ಐದು ಜಿಲ್ಲೆಗಳಲ್ಲಿ ನಿರೀಕ್ಷಿಸಿದಷ್ಟು ಸ್ಥಾನಗಳು ಸಿಗದೆ ಬಿಜೆಪಿಗೆ ಮ್ಯಾಜಿಕ್ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ.

ಬೆಂಗಳೂರು, ಬಿಜಾಪುರ, ಬಳ್ಳಾರಿ, ಬೆಳಗಾವಿ ಹಾಗೂ ಬೀದರ್‌ನಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ನಿರೀಕ್ಷೆ ಇತ್ತು. ಆದರೆ ನಿರೀಕ್ಷಿತ ಸ್ಥಾನಗಳು ಸಿಗದ ಹಿನ್ನೆಲೆಯಲ್ಲಿ ಬಿಜೆಪಿಗೆ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ. ಈ ಪ್ರದೇಶದಲ್ಲಿ ಜನರು ಬಿಜೆಪಿ ಕೈಹಿಡಿಯುತ್ತಿದ್ದರೆ ಪಕ್ಷಕ್ಕೆ ಸರಳ ಬಹುಮತ ಖಂಡಿತ ಬರುತ್ತಿತ್ತು. ಆದರೆ ಜನಾದೇಶ ಕಳೆದುಕೊಂಡಿರುವ ಹಾಗೂ ಜನಾದೇಶ ಗಳಿಸದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿಯ ಮೂಲಕ ಸರಕಾರ ರಚಿಸಿದೆ. ಹಸಿದ ಜೆಡಿಎಸ್ ಹಾಗೂ ಹಳಸಿದ ಕಾಂಗ್ರೆಸ್‌ನ ಮೈತ್ರಿ ಸರಕಾರ ಇದೆಂದು ಲೇವಡಿ ಮಾಡಿದರು.

ಬಿಜೆಪಿ ವಿರುದ್ದ ಎಲ್ಲಾ ಪಕ್ಷಗಳು ಒಟ್ಟಾಗುತ್ತಿದೆ. ಶಿಕ್ಷಕ ಮತ್ತು ಪದವೀದರ ಕ್ಷೇತ್ರದ ‌ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಗುಂಡು ತುಂಡುಗಳ ಪಾರ್ಟಿ, ಹಣದ ಆಮೀಷ ಒಡ್ಡುತ್ತಿದೆ ಎಂದು ಆರೋಪಿಸಿದ ಸಿ.ಟಿ. ರವಿ ಆವರು, ಕೆಲವೊಂದು ಜಿಲ್ಲೆಗಳಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಗಳಿಸುವಲ್ಲಿ ವಿಫಲವಾಗಿರುವ ಬಗ್ಗೆ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯ ಬಳಿಕ ಸಮಾಲೋಚನೆ ನಡೆಸಿ ಚರ್ಚಿಸಲಾಗುವುದು.

ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಅಮಿತ್ ಶಾರವರ ಶ್ರಮದ ಹೊರತಾಗಿಯೂ ಮ್ಯಾಜಿಕ್ ನಂಬರ್ ತಲುಪದಿರಲು ಸಾಧ್ಯವಾಗದ ನಮ್ಮ ವೈಫಲ್ಯಗಳನ್ನು ಕಂಡುಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರನ್ನು ಒಗ್ಗಟ್ಟಾಗಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಕ್ಯಾ.ಬೃಜೇಶ್ ಚೌಟ,ಸಂಜಯ್ ಪ್ರಭು, ಜಿತೇಂದ್ರ ಕೊಟ್ಟಾರಿ, ಭಾಸ್ಕರಚಂದ್ರ ಶೆಟ್ಟಿ ಹಾಗೂ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.

Comments are closed.