( ಕಡತ ಚಿತ್ರ )
ಮಂಗಳೂರು, ಜೂನ್.07: ಕರಾವಳಿಯಲ್ಲಿ ಇಂದು ಮತ್ತು ನಾಳೆ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು ಹೈಅಲರ್ಟ್ ಘೋಷಿಸಿದೆ.
ಹವಾಮಾನ ಇಲಾಖೆಯ ಎಚ್ಚರಿಕೆಯ ಪ್ರಕಾರ ಮುಂದಿನ 5 ದಿನಗಳ ಕಾಲ ಕರ್ನಾಟಕದ ಕರಾವಳಿ ಪ್ರದೇಶ, ಕೇರಳ, ಗೋವಾ, ಮಹಾರಾಷ್ಟ್ರ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಸಂಬಂಧ ವಿಶೇಷವಾಗಿ ಕೇಂದ್ರ ಹವಾಮಾನ ಇಲಾಖೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು, ಕರ್ನಾಟಕದ ಕರಾವಳಿಯಲ್ಲಿ ಎಚ್ಚರ ವಹಿಸುವಂತೆ ತಿಳಿಸಿದೆ.
ಹವಾಮಾನ ಇಲಾಖೆಯ ಸೂಚನೆಯಂತೆ, ನಾಳೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದ್ದು, 60 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಒಂದು ಅಂದಾಜಿನ ಪ್ರಕಾರ ಜೂನ್ 8ರಂದು ಈ ಮೂರು ಜಿಲ್ಲೆಗಳಲ್ಲಿ 65 ಮಿಮೀ ನಿಂದ 115ಮಿಮೀ ವರೆಗೆ ಭಾರೀ ಮಳೆ ಸುರಿಯಲಿದೆ.
ಸಮುದ್ರದ ಮಟ್ಟದಲ್ಲಿ ಏರಿಕೆಯಾಗುವ ಆತಂಕವಿರುವ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ಇಳಿಯದಂತೆ ಆದೇಶ ಹೊರಡಿಸಲಾಗಿದೆ. ಕರಾವಳಿಗೆ ಈಗಾಗಲೇ ಮುಂಗಾರು ಮಾರುತಗಳ ಪ್ರವೇಶವಾಗಿದೆ ಈ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂನ್ 6ರ ಬಳಕೆ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಹವಾಮಾನ ಇಲಾಖೆ ಜೂನ್ 7 ಮತ್ತು 8ರಂದು ಮಹಾಮಳೆ ಸುರಿಯುವ ಎಚ್ಚರಿಕೆ ನೀಡಿದೆ.
Comments are closed.