ಕರಾವಳಿ

ಮಂಗಳೂರಿನಲ್ಲಿ ಮುಂದುವರಿದ ಭಾರೀ ಮಳೆ : ಭವಂತಿ ಸ್ಟ್ರೀಟ್‌ನಲ್ಲಿ ಹಳೆ ಕಟ್ಟಡ ಭಾಗಶ: ಕುಸಿತ : ದ್ವಿಚಕ್ರ ವಾಹನಗಳು ಜಖಂ

Pinterest LinkedIn Tumblr

ಮಂಗಳೂರು ಜೂನ್ 09 : ಕಳೆದ ಮೂರು ದಿನಗಳಿಂದ ಕರಾವಳಿಯಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭಾರೀ ಗಾಳಿ ಮಳೆಯಾಗುತ್ತಿದೆ.

ಈ ನಡುವೆ ಸತತವಾಗಿ ಸುರಿಯುತ್ತಿರುವ ಗಾಳಿಮಳೆಗೆ ನಗರದ ಕೇಂದ್ರ ಮಾರುಕಟ್ಟೆ ಬಳಿಯ ಭವಂತಿ ಸ್ಟ್ರೀಟ್‌ನಲ್ಲಿ ಹಳೆ ಕಟ್ಟಡವೊಂದರ ಒಂದು ಪಾರ್ಶ್ವ ಕುಸಿದು ಅದರಡಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದೆ. ಇದರಿಂದ ಕೆಲವು ದ್ವಿಚಕ್ರ ವಾಹನಗಳು ಅದರಡಿ ಸಿಲುಕಿ ಜಖಂಗೊಂಡಿವೆ.

ಶನಿವಾರ ಮುಂಜಾನೆಯಿಂದ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು, ಜೆಲ್ಲೆಯ ಹಲವೆಡೆಗಳಲ್ಲಿ ಭಾರೀ ಗಾಳಿ ಮಳೆಯಿಂದಾಗಿ ಹಲವಾರು ಮರಗಳು ಧರೆಗುರುಳಿದೆ. ಈ ಸಂದರ್ಭ ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ನೆಲಸಮವಾಗಿದ್ದರಿಂದ ಜಿಲ್ಲೆಯ ಹಲವಾರು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಟ್ಟ ಮೋಡಗಳು ಇದ್ದು, ದಿನವಿಡೀ ಮಳೆ ಆಗುವ ಸಾಧ್ಯತೆ ಇದೆ. ಈಗಾಗಲೆ ಭಾರಿ ಮಳೆ ಕಂಡಿರುವ ಜಿಲ್ಲೆಯಲ್ಲಿ ಇನ್ನೂ ಕೆಲವು ದಿನ ಪರಿಸ್ಥಿತಿ ಹೀಗೆ ಮುಂದುವರೆಯಲಿದೆ.ಹವಾಮಾನ ಇಲಾಖೆಯ ಎಚ್ಚರಿಕೆಯ ಪ್ರಕಾರ ಇನ್ನೂ 2 ದಿನ ಭಾರೀ ಮಳೆ ಮುಂದುವರೆಯಲಿದೆ. ಕೇಂದ್ರ ಹವಾಮಾನ ಇಲಾಖೆ ಶುಕ್ರವಾರ ರಾಜ್ಯ ಸರಕಾರಕ್ಕೆ ಪತ್ರ ಬರೆದು ಕರಾವಳಿಯಲ್ಲಿ ಜೂನ್ 12 ರವರೆಗೆ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದ್ದು, ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದೆ.

ಮುಂಗಾರು ಬಿರುಸು ಪಡೆದುಕೊಳ್ಳುತ್ತಿದ್ದಂತೆ ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಏರಿಕೆ ಕಂಡುಬಂದಿದೆ. ಈ ನಡುವೆ ಕಡಲಿನ ಅಬ್ಬರ ಕೂಡ ಜೋರಾಗಿದೆ. ಮಳೆಯ ಜೊತೆಗೆ ಗಾಳಿಯ ರಭಸದಿಂದಾಗಿ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗಿದ್ದು ಕಡಲು ಭೋರ್ಗರೆಯುತ್ತ ದಡಕ್ಕೆ ಅಪ್ಪಳಿಸುತ್ತಿದೆ. ಮೀನುಗಾರರಿಗೆ ಸಮುದ್ರದಲ್ಲಿ ಮೀನು ಹಿಡಿಯುವ ಸಾಹಸ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಭಾಗದ ಕಾರವಾರ, ಮಂಗಳೂರು, ಉಡುಪಿಗಳಲ್ಲೂ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ಥವ್ಯಸ್ಥವಾಗಿದೆ. ಇದೇ ವಾತಾವರಣ ಇನ್ನೂ ಕೆಲವು ದಿನ ಮುಂದುವರಿದರೆ ಕರಾವಳಿ ಜಿಲ್ಲೆಗಳು ಪ್ರವಾಹ ಪರಿಸ್ಥತಿಗೆ ಸಿಲುಕುವ ಅಪಾಯ ತಪ್ಪಿದ್ದಲ್ಲ.

Comments are closed.