ಕರಾವಳಿ

ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ತುಳು ಭಾಷೆಗೆ ಮಾನ್ಯತೆ ಹಿನ್ನೆಲೆ : ಪ್ರಶಾಂತ್‌ರಾಮ್ ಕೊಟ್ಟಾರಿಗೆ ತುಳು ಅಕಾಡೆಮಿಯಲ್ಲಿ ಸನ್ಮಾನ

Pinterest LinkedIn Tumblr

ಮಂಗಳೂರು : ಅಮೆರಿಕಾ ದೇಶದ ಜಾರ್ಜಿಯ ರಾಜ್ಯದಲ್ಲಿ ಅಲ್ಲಿನ ರಾಜ್ಯ ಸರಕಾರದ ವತಿಯಿಂದ ಅಧಿಕೃತವಾಗಿ ತುಳು ಭಾಷೆ ಮತ್ತು ಸಂಸ್ಕೃತಿ ಸಪ್ತಾಹ ಆಚರಣೆಗೆ ಕಾರಣಕರ್ತರಾದ ತುಳು ಸಂಶೋಧಕ ಪ್ರಶಾಂತ್‌ರಾಮ್ ಕೊಟ್ಟಾರಿ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿಯ ಸಿರಿ ಚಾವಡಿಯಲ್ಲಿ ಸನ್ಮಾನಿಸಲಾಯಿತು.

ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಶಾಂತ್‌ರಾಮ್ ಕೊಟ್ಟಾರಿ ಅವರನ್ನು ಅಕಾಡೆಮಿಯ ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು.

ಅಮೆರಿಕದ ಜಾರ್ಜಿಯಾ ರಾಜ್ಯ ಸರಕಾರವು ಪ್ರತಿ ವರ್ಷ ಮಾರ್ಚ್ 25 ರಿಂದ 31ರ ತನಕ ತುಳು ಭಾಷೆ ಮತ್ತು ಸಂಸ್ಕೃತಿ ಸಪ್ತಾಹವನ್ನು ಆಚರಿಸಲು ನಿರ್ಧರಿಸಿದೆ. ಅಲ್ಲಿನ ಸರಕಾರವು ಈ ನಿರ್ಧಾರ ಕೈಗೊಳ್ಳುವ ಮೊದಲು ತುಳು ಭಾಷೆಯ ಬಗ್ಗೆ ಜಾರ್ಜಿಯಾ ಸರಕಾರಕ್ಕೆ ಪ್ರಶಾಂತ್‌ರಾಮ್ ಕೊಟ್ಟಾರಿ ಅವರು ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಈ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಜಾರ್ಜಿಯಾ ಸರಕಾರವು ತುಳು ಭಾಷಾ ಸಪ್ತಾಹದ ಬಗ್ಗೆ ಅಧಿಕೃತ ಆದೇಶ ಹೊರಡಿಸಿತ್ತು.

ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ತುಳುವ ಪ್ರಶಾಂತ್‌ರಾಮ್ ಕೊಟ್ಟಾರಿ ಅವರು ಕಳೆದ ಐದು ವರ್ಷಗಳಿಂದ ವೃತ್ತಿ ನಿಮಿತ್ತ ಅಮೆರಿಕಾದ ಜಾರ್ಜಿಯಾದಲ್ಲಿ ನೆಲೆಸಿರುವವರು. ಅಮೆರಿಕನ್ ಫೋಕ್‌ಲೋರ್ ಸೊಸೈಟಿಯ ಗೌರವ ಸದಸ್ಯರಾಗಿರುವ ಕೊಟ್ಟಾರಿ ಅವರು ತುಳು ಭಾಷೆಯ ಬಗ್ಗೆ ಅಮೆರಿಕಾ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಮೂವತ್ತಕ್ಕೂ ಹೆಚ್ಚು ತುಳು ಭಾಷಾ ಪರಿಚಯ – ಕಲಿಕೆ ಶಿಬಿರಗಳನ್ನು ನಡೆಸಿದ್ದಾರೆ .

ಪ್ರಶಾಂತ್ ರಾಮ್ ಅವರ ತುಳುನಾಡಿನ ಅಣ್ಣ-ತಮ್ಮ ಅರಸು ದೈವಗಳ ಬಗ್ಗೆ ನಾಡಿನ ಹಿರಿಯ ಜಾನಪದ ವಿದ್ವಾಂಸರ ಮಾರ್ಗದರ್ಶನದಲ್ಲಿ ” ಅತ್ತಾವರ ದೆಯ್ಯೊಂಗುಳು ” ಎಂಬ ಕೃತಿ ರಚಿಸಿದ್ದಾರೆ. ಈ ಕೃತಿಯು 2015ನೇ ಸಾಲಿನ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತವಾಗಿತ್ತು.

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಶಾಂತ್‌ರಾಮ್ ಕೊಟ್ಟಾರಿ ಅವರು , ತಾನು ತುಳು ಭಾಷೆಯ ಮೇಲಿನ ಪ್ರೀತಿಯಿಂದ ತನ್ನಿಂದ ಸಾಧ್ಯವಾಗುವಷ್ಟು ಕೆಲಸವನ್ನು ಮಾಡಿದ್ದೇನೆ. ವಿದೇಶದಲ್ಲಿ ತುಳು ಭಾಷೆಗೂ ಮಾನ್ಯತೆ ಲಭಿಸಿರುವುದು ತಾನು ಇನ್ನೂ ಹೆಚ್ಚು ಕೆಲಸ ಮಾಡಲು ಪ್ರೋತ್ಸಾಹ ಸಿಕ್ಕಿದಂತಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ರಾಜೇಶ್ ಜಿ, ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ತಾರಾನಾಥ್ ಗಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Comments are closed.