ಮಂಗಳೂರು, ಜೂನ್.12: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿದ್ದ ಮಳೆ ಸೋಮವಾರ ಹಾಗೂ ಮಂಗಳವಾರ ಸ್ವಲ್ಪ ಕಡಿಮೆಯಾಗಿದೆ. ಕೆಲವುದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಭಾರೀ ಮಳೆಗಾಳಿಯಿಂದ ತತ್ತರಿಸಿದ ಜನತೆ ಸ್ವಲ್ಪ ನಿರಾಳವಾಗಿದ್ದಾರೆ.
ಮುಂಗಾರು ಪೂರ್ವ ಸುರಿದ ಉತ್ತಮ ಮಳೆಯಿಂದಾಗಿ ಈ ಬಾರಿ ನಗರದ ನಾಗರಿಕರು ನಿರಾಳರಾಗಿದ್ದಾರೆ. ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಆರಂಭವಾಗಿದ್ದು, ಪ್ರತಿ ಬಾರಿ ಉದ್ಭವಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಈ ವರ್ಷ ಇಲ್ಲದಾಗಿದೆ.
ಕಳೆದ ವರ್ಷ 5 ಮೀಟರ್ ಎತ್ತರಕ್ಕೆ ನೀರು ಸಂಗ್ರಹಿಸಲಾಗಿದ್ದು, ಈ ವರ್ಷದಿಂದ ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ 6 ಮೀಟರ್ ನೀರು ನಿಲ್ಲಿಸಲಾಗುತ್ತಿದೆ. ಸದ್ಯಕ್ಕೆ ಒಟ್ಟು ಸಂಗ್ರಹಣೆ ಮಾಡಿರುವ ನೀರಿನ ಮಟ್ಟದಲ್ಲಿ 10 ಸೆಂ.ಮೀ. ಮಾತ್ರ ಕಡಿಮೆ
ಯಾಗಿದೆ. ಇದರ ಆಧಾರದಲ್ಲಿ ಮಂಗಳೂರು ನಗರಕ್ಕೆ ಕನಿಷ್ಠ 50 ದಿನಗಳ ವರೆಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ. ಅಂದರೆ ಜೂನ್ 20ರವರೆಗೆ ನೀರು ಅಬಾಧಿತವಾಗಿ ನೀರು ಪೂರೈಕೆ ಮಾಡಬಹುದಾಗಿದೆ.
ಗಾಳಿ-ಮಳೆಗೆ ಸೊತ್ತುಗಳಿಗೆ ಹಾನಿ :
ಹವಾಮಾನ ಇಲಾಖೆ ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದರೂ, ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆದರೂ ಜಿಲ್ಲೆಯಾದ್ಯಂತ ಗಾಳಿ-ಮಳೆಗೆ ಸಿಲುಕಿ ಮನೆ ಹಾಗೂ ಇತರ ಸೊತ್ತುಗಳಿಗೆ ಆಗುವ ಹಾನಿಯ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ.
ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ :ಸ್ನಾನ ಘಟ್ಟ ಮುಳುಗಡೆ
ಘಟ್ಟದ ಮೇಲಿನ ಭಾಗದಲ್ಲಿ ಹಾಗೂ ಸ್ಥಳಿಯವಾಗಿ ಸುರಿದ ಭಾರಿ ಮಳೆಗೆ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು ನೆರೆ ನೀರಿನಿಂದ ಕುಕ್ಕೆ ಸುಬ್ರಹ್ಮಣ್ಯ ಸ್ನಾನ ಘಟ್ಟ ಸೋಮವಾರ ಸಂಪೂರ್ಣ ಮುಳುಗಡೆಯಾಗಿದೆ.
ಸ್ನಾನ ಘಟ್ಟ ಪೂರ್ಣ ಮುಳುಗಡೆ ಆಗಿದ್ದರಿಂದ ಭಕ್ತರು ನದಿ ದಡದಲ್ಲಿ ತೀರ್ಥ ಸ್ನಾನ ನೆರವೇರಿಸಿದರು. ನದಿಗೆ ಇಳಿಯದಂತೆ ಸುಬ್ರಹ್ಮಣ್ಯ ಪೊಲೀಸರು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದರು.
ಭಾರಿ ಮಳೆಯಿಂದಾಗಿ ಸುಬ್ರಹ್ಮಣ್ಯದಲ್ಲಿ ಜನಜೀವನ ಭಾರಿ ಅಸ್ತವ್ಯಸ್ತಗೊಂಡಿತ್ತು. ಚಾರದಲ್ಲಿ ಭಾರಿ ವ್ಯತ್ಯಾಯ ಕಂಡುಬಂತು. ಕ್ಷೇತ್ರ ಸಂಪರ್ಕಿಸುವ ಧರ್ಮಸ್ಥಳ-ಗುಂಡ್ಯ- ಸುಬ್ರಹ್ಮಣ್ಯ, ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ಪುತ್ತೂರು- ಕಾಣಿಯೂರು, ಮಡಿಕೇರಿ-ಸುಳ್ಯ-ಸುಬ್ರಹ್ಮಣ್ಯ ಮಾರ್ಗಗಳ ಸಂಪರ್ಕದಲ್ಲಿ ಅಡಚಣೆಗಳು ಕಂಡುಬಂದಿದೆ. ಈ ಮಾರ್ಗಗಳಲ್ಲಿ ಬಸ್ ಸಂಚಾರ ಇಲ್ಲದೆ ಕ್ಷೇತ್ರಕ್ಕೆ ಬಂದ ಭಕ್ತರು ಮರಳಿ ಊರಿಗೆ ತೆರಳಲು ಹರಸಾಹಸ ಪಟ್ಟರು.
ಸಮುದ್ರ ಪ್ರಕ್ಷುಬ್ಧ : ಕಟ್ಟೆಚ್ಚರ ವಹಿಸಲು ಸೂಚನೆ :
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ ಅಬ್ಬರ ಹೆಚ್ಚಾಗಿದ್ದು ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತ್ತಿವೆ. ಮಳೆಯ ಜೊತೆಗೆ ಗಾಳಿಯ ರಭಸದಿಂದಾಗಿ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗಿದ್ದು ಕಡಲು ಭೋರ್ಗರೆಯುತ್ತ ದಡಕ್ಕೆ ಅಪ್ಪಳಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಗಾಳಿ ಮಳೆ ಅಬ್ಬರ ಹೆಚ್ಚುತ್ತಿರುವಂತೆಯೇ ಉಳ್ಳಾಲ ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಕಡಲು ಕೂಡಾ ಪ್ರಕ್ಷುಬ್ದಗೊಂಡಿದ್ದು ಅಲೆಗಳ ಅಬ್ಬರಕ್ಕೆ ತಡೆಗೋಡೆಗಾಗಿ ಹಾಕಲಾಗಿದ್ದ ಬೃಹತಾಕಾರದ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ. ಇದು ಕಡಲತಡಿಯ ಜನರನ್ನು ಆತಂಕಕ್ಕೀಡು ಮಾಡಿದೆ.
ಕಳೆದ ಹಲವು ವರ್ಷದಿಂದ ಕಡಲಗಕೊರೆತದಿಂದಾಗಿ ಉಳ್ಳಾಲ ಸೋಮೇಶ್ವರ ಉಚ್ಚಿಲ ಪರಿಸರದಲ್ಲಿ ಮನೆಗಳು ಸಮುದ್ರ ಪಾಲಾಗಿದ್ದವು ಜೊತೆಗೆ ಕೆಲವು ಮನೆಗಳು ಹಾನಿಯಾಗಿದ್ದವು. ಅದರಲ್ಲೂ ಕಳೆದ ವರ್ಷವಂತೂ ಕಡಲ್ಕೊರೆತದ ಸಮಸ್ಯೆ ಈ ಭಾಗದಲ್ಲಿ ಬಹಳಷ್ಟು ತೊಂದರೆಯನ್ನುಂಟು ಮಾಡಿತ್ತು. ಇದಕ್ಕಾಗಿ ಸರಕಾರವು ಸಮುದ್ರ ಬದಿಯಲ್ಲಿ ಬೃಹತ್ ಆಕಾರದ ಬಂಡೆಗಲ್ಲುಗಳನ್ನು ಹಾಕಿ ತಡೆಗೋಡೆ ನಿರ್ಮಿಸಿ ಅಲೆಗಳ ಅಬ್ಬರವನ್ನು ತಡೆಯಲು ಪ್ರಯತ್ನಿಸುತ್ತಿದೆ. ಆದರೆ ಈಗ ಕಡಲಿನ ಅಲೆಗಳ ತೀವ್ರತೆಗೆ ಬೃಹತಾಕಾರದ ಕಲ್ಲುಗಳು ಕೂಡಾ ಕಡಲಿನ ಒಡಲು ಸೇರುತ್ತಿವೆ.
ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಸೂಚಿಸಲಾಗಿದೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿಯೂ ಭಾರಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಹೊಳೆ, ನದಿಗಳು ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಟ್ಟ ಮೋಡಗಳು ಇದ್ದು, ದಿನವಿಡೀ ಮಳೆ ಆಗುವ ಸಾಧ್ಯತೆ ಇದೆ. ಸದ್ಯಕ್ಕೆ ಮಂಗಳೂರು ಸೇರಿದಂತೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕಳೆದ ಬಾರಿಗಿಂತ ಈ ಬಾರಿ ಮುಂಗಾರು ಸಕಾಲದಲ್ಲಿ ಚುರುಕುಗೊಂಡಿದೆ. ಜೂನ್ ತಿಂಗಳಿಗಿಂತ ಮೊದಲೇ ಮಳೆ ಆರಂಭಗೊಂಡಿದ್ದ ಕಾರಣ ಜುಲೈ ತಿಂಗಳೊಳಗೆ ಬಿತ್ತನೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಕೃಷಿಕರು ಅಭಿಪ್ರಾಯ ಸಂತಸ ವ್ಯಕ್ತಪಡಿಸಿದ್ದಾರೆ.
ಈಗಾಗಲೆ ಭಾರಿ ಮಳೆ ಕಂಡಿರುವ ಜಿಲ್ಲೆಯಲ್ಲಿ ಇನ್ನೂ ಕೆಲವು ದಿನ ಪರಿಸ್ಥಿತಿ ಹೀಗೆ ಮುಂದುವರೆಯಲಿದೆ.ಹವಾಮಾನ ಇಲಾಖೆಯ ಎಚ್ಚರಿಕೆಯ ಪ್ರಕಾರ ಇನ್ನೂ ಕೆಲವು ದಿನ ಭಾರೀ ಮಳೆ ಮುಂದುವರೆಯಲಿದೆ. ಕೇಂದ್ರ ಹವಾಮಾನ ಇಲಾಖೆ ಕರಾವಳಿಯಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದ್ದು, ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದೆ.
Comments are closed.