ಕರಾವಳಿ

ಬಾಲಕಾರ್ಮಿಕರಿಂದ ದುಡಿಮೆ ಶಿಕ್ಷಾರ್ಹ ಅಪರಾಧ – ಜೈಲು ಶಿಕ್ಷೆಯೊಂದಿಗೆ ದಂಡ : ಹಿರಿಯ ಸಿವಿಲ್ ನ್ಯಾಯಾಧೀಶ ಎ.ಜಿ.ಗಂಗಾಧರ್

Pinterest LinkedIn Tumblr

ಮ0ಗಳೂರು ಜೂನ್ 12 : ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕರ ಕಾಯ್ದೆ-1986ರ ಪ್ರಕಾರ 14 ವರ್ಷದ ಒಳಪಟ್ಟ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಯವುದೇ ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿ ಕೊಳ್ಳುವ ಮಾಲೀಕರಿಗೆ ರೂ. 20000 ದಿಂದ ರೂ. 50000 ದವರೆಗೆ ದಂಡ ಮತ್ತು 6 ತಿಂಗಳಿನಿಂದ 2 ವರ್ಷದವರೆಗೆ ಜೈಲು ಶಿಕ್ಷೆಯೊಂದಿಗೆ ರೂ. 20000 ಕಾರ್ಪಸ್ ನಿಧಿ ಪಾವತಿಸುವ ಶಿಕ್ಷೆ ಜಾರಿ ಮಾಡಬಹುದಾಗಿದೆ ಎಂದು ಮಂಗಳೂರು ಮುಖ್ಯ ನ್ಯಾಯಿಕ ದಂಡಾಧಿಕಾರಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಎ.ಜಿ.ಗಂಗಾಧರ್ ತಿಳಿಸಿದ್ದಾರೆ.

ಅವರು ಮಂಗಳವಾರ ನಗರದ ಪುರಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಢಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಪೋಲಿಸ್ ಇಲಾಖೆ, ವಕೀಲರ ಸಂಘ, ಮಕ್ಕಳ ಸಹಾಯವಾಣಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ “ವಿಶ್ವ ಬಾಲಕಾರ್ಮಿಕರ ಪದ್ದತಿ ವಿರೋಧಿ ದಿನ” ಪ್ರಯುಕ್ತ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದ ಉಧ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಎಲ್ಲಾ ಸಾರ್ವಜನಿಕರು ಬಾಲ ಕಾರ್ಮಿಕ ಪದ್ದತಿ ಪಿಡುಗನ್ನು ತೊಲಗಿಸಲು ಬದ್ದರಾಗಬೇಕಾಗಿದೆ. ಇಂದಿನ ವಿದ್ಯಾರ್ಥಿಗಳ ಚೈತನ್ಯದಿಂದ ಈ ಅನಿಷ್ಟ ಪಿಡುಗನ್ನು ತೊಲಗಿಸ ಬಹುದಾಗಿದೆ ಎಂದರು.

ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ನಾಗರಾಜ್ ಮಾತನಾಡಿ, ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ವರ್ಷದ ಸಮೀಕ್ಷೆ ಮೇರೆಗೆ 2 ಬಾಲ ಕಾರ್ಮಿಕ ಪ್ರಕರಣ ದಾಖಲಾಗಿದ್ದು, ಈ ಬಾಲಕಾರ್ಮಿಕರು ವಲಸಿಗರ ಮಕ್ಕಳಾಗಿರುತ್ತಾರೆ. ಅದರೇ ಜಿಲ್ಲೆಯ ಯಾವುದೇ ಮಕ್ಕಳು ಬಾಲಕಾರ್ಮಿಕರಾಗಿರುವುದಿಲ್ಲ ಎಂದರು.

ಪಡಿ ಚೈಲ್ಡ್ ಲೈನ್ ಮತ್ತು ರಾಜ್ಯ ಸಂಚಾಲಕ ಹಾಗೂ ದ.ಕ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ ಮಾತನಾಡಿ ಕಾರ್ಮಿಕ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಕಾನೂನು ಇಲಾಖೆ ಇವರ ಸಹಕಾರವಿದ್ದಲ್ಲಿ ಇನ್ನು ಹೆಚ್ಚಿನ ಪ್ರಕರಣಗಳನ್ನು ಪತ್ತೆ ಹಚ್ಚಲು ಅನುಕೂಲವಾಗುವುದು. ಅದ್ದರಿಂದ ಈ ನಿಟ್ಟನಲ್ಲಿ ಎಲ್ಲಾ ಇಲಾಖೆಗಳು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಪಣತೊಡ ಬೇಕಾಗಿದೆ ಎಂದು ಹೇಳಿದರು. ಇದಕ್ಕೂ ಮೊದಲು ಹಂಪನಕಟ್ಟೆಯಿಂದ ಪುರಭವನದವರೆಗೆ ಬಾಲ ಕಾರ್ಮಿಕ ಜಾಥವನ್ನು ಏರ್ಪಡಿಸಲಾಯಿತು.

ಸಮಾರಂಭದಲ್ಲಿ ಮಂಗಳೂರು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನ ಗೌಡ ಪಾಟೀಲ್ ಬಾಲಕಾರ್ಮಿಕ ವಿರೋದಿ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು.

ಶಾಲಾ ವಿದ್ಯಾರ್ಥಿಗಳಾದ ಜ್ಯೋತಿ, ರಕ್ಷಿತಾ ಇವರಿಂದ ಹಾಗೂ ಹಿರಿಯ ಕವಿ ಮಹಮ್ಮದ್ ಮಾರಿಪಳ್ಳ ಇವರಿಂದ ಬಾಲಕಾರ್ಮಿಕ ನಿರ್ಮೂಲನೆ ಕುರಿತ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಬಿಜೈ, ಕಾಪಿಕಾಡ್ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗುಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೈ ಶಿವರಾಮಯ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನಿರ್ದೇಶಕಿ ಹಿಲ್ಡಾ ರಾಯಪ್ಪನ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಶ್ರೀನಿವಾಸ, ಎಸಿಪಿ ಹನುಮಂತರಾಯ ಉಪಸ್ಥಿತರಿದ್ದರು.

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ ಕಾಯ್ದೆ-1986 ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲ ಕೆ. ನಿಕೇಶ್ ಶೆಟ್ಟಿ ಬಾಗವಹಿಸಿದ್ದರು. ಹಿರಿಯ ಕಾರ್ಮಿಕ ಆಯುಕ್ತ ರಾಜ ಶೇಕರ ರೆಡ್ಡಿ ವಂದಿಸಿದರು.

Comments are closed.