ಮಂಗಳೂರು, ಜೂ.13: ನಗರದ ಬಂದರಿನಲ್ಲಿರುವ ವಕ್ಫ್ ಜಮೀನಿನಲ್ಲಿ ಅಕ್ರಮ ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಿರುವ ವಕ್ಫ್ ವೆಲ್ಫೇರ್ ಕಮಿಟಿ, ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ವಕ್ಫ್ ಬೋರ್ಡ್ ಜೂ.19ರಂದು ವಿಚಾರಣೆಗೆ ಹಾಜರಾಗುವಂತೆ 7 ಮಂದಿಗೆ ನೋಟಿಸ್ ಜಾರಿಗೊಳಿಸಿದೆ ಎಂದು ಕಮಿಟಿಯ ಮುಖಂಡ ಹಾಗೂ ಮಾನವ ಹಕ್ಕು ಹೋರಾಟಗಾರ ಹನೀಫ್ ಸಾಹೇಬ್ ಪಾಜಪಳ್ಳ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲಿನಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಂದರಿನ ಗೋಳಿಕಟ್ಟೆ ಬಝಾರ್ ಬಳಿಯ ಸ.ನಂ. 670/1ರಲ್ಲಿರುವ 69 ಸೆಂಟ್ಸ್ ಜಮೀನನ್ನು ಬಂದರ್ ಕಚ್ಚಿ ಜುಮಾ ಮಸ್ಜಿದ್‌ನ ಮುತವಲ್ಲಿಯು ವ್ಯಕ್ತಿಯೊಬ್ಬರಲ್ಲಿ ಒಳ ಒಪ್ಪಂದ ಮಾಡಿಕೊಂಡ ಮೇರೆಗೆ ಆ ವ್ಯಕ್ತಿಯು ಅಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಅಕ್ರಮ ಕಟ್ಟಡವನ್ನು ನಿರ್ಮಿಸಿದ್ದಾರೆ. ಈ ಬಗ್ಗೆ ನೀಡಿದ ದೂರಿನಂಂತೆ ರಾಜ್ಯ ವಕ್ಫ್ ಬೋರ್ಡ್ ವಿಚಾರಣೆಗೆ ನೋಟಿಸ್ ಜಾರಿಗೊಳಿಸಿದೆ ಎಂದರು.
ಈ ಜಮೀನು 1968ರಲ್ಲಿ ವಕ್ಫ್ ಬೋರ್ಡ್‌ನಲ್ಲಿ ನೋಂದಣಿಗೊಂಡಿದೆ. ಹಾಗಾಗಿ ಇದು ವಕ್ಫ್ ಆಸ್ತಿ. ಇದರ ದುರುಪಯೋಗಕ್ಕೆ ಯಾವೊಬ್ಬ ಖಾಸಗಿ ವ್ಯಕ್ತಿಗೂ ಅಧಿಕಾರವಿಲ್ಲ. ಆದರೆ, ಅಲ್ಲಿನ ಮುತವಲ್ಲಿ ತನಗೆ ಇದು ವಂಶ ಪಾರಂಪರ್ಯದಿಂದ ಬಂದಿದೆ ಎನ್ನುವ ಮೂಲಕ ದುರುಪಯೋಗಪಡಿಸಿದ್ದಾರೆ. ಅಲ್ಲದೆ, ಕಚ್ಚಿ ಮಸ್ಜಿದ್ ಸುತ್ತಮುತ್ತಲಿನ ಕಟ್ಟಡದ ಕೋಣೆಗಳನ್ನು ಕಡಿಮೆ ಬಾಡಿಗೆಗೆ ನೀಡಿದ್ದಾರೆ. ಇದರ ಬಾಡಿಗೆದಾರರು ಇತರರಿಗೆ ಒಳ ಒಪ್ಪಂದ ಮಾಡಿಕೊಂಡು ಸಾವಿರಾರು ರೂಪಾಯಿ ಬಾಡಿಗೆಗೆ ಕೋಣೆಗಳನ್ನು ನೀಡಿದ್ದಾರೆ ಎಂದು ಹನೀಫ್ ಪಾಜಪಳ್ಳ ಆರೋಪಿಸಿದರು.
ಕಾನೂನು ಸಲಹೆಗಾರ ನ್ಯಾಯವಾದಿ ನವೀನ್ ಜಿ., ಸ್ಥಳೀಯರಾದ ಫಾರೂಕ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ ಕೃಪೆ : ವಾಭಾ
Comments are closed.