ಮಂಗಳೂರು ಜೂನ್ 14: ವಿಚಾರವಾದಿ ಪ್ರೊ. ಕಲ್ಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಬಳಿಕ ಇದೀಗ ಮಂಗಳೂರಿನ ಖ್ಯಾತ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಅವರ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.
ಈ ಹಿಂದೆ ಕೂಡ ಪ್ರೋ. ನರೇಂದ್ರ ನಾಯಕ್ ಅವರ ಕೊಲೆಗೆ ಯತ್ನಿಸಲಾಗಿತ್ತು ಎಂದು ತಿಳಿದು ಬಂದಿದ್ದು, ಇದೀಗ ಪ್ರೊ. ನರೇಂದ್ರ ನಾಯಕ್ ಅವರ ಫ್ಲಾಟ್‌ಗೆ ಅಪರಿಚಿತ ಯುವಕನೊಬ್ಬ ಆಗಮಿಸಿ ಅನುಮಾನಸ್ಪದ ರೀತಿಯಲ್ಲಿ ತೆರಳಿರುವುದರಿಂದ ಈ ಅನುಮಾನಕ್ಕೆ ಪುಷ್ಠಿ ನೀಡಿದೆ.
ಜೂನ್ 12 ರ ಮಧ್ಯಾಹ್ನ ಅಪರಿಚಿತ ವ್ಯಕ್ತಿಯೊಬ್ಬ ಪ್ರೊ.ನರೇಂದ್ರ ನಾಯಕ್ ಅವರು ವಾಸಿಸುವ ಮಂಗಳೂರಿನ ಹ್ಯಾಟ್ ಹಿಲ್ ನಲ್ಲಿರುವ ನೋಯಲ್ ಪಾರ್ಕ್ ಫ್ಲ್ಯಾಟ್ ಗೆ ಬಂದಿದ್ದು, ತನ್ನ ಶಿಕ್ಷಕರೊಬ್ಬರಿಗೆ ಕೆಲಸದವರು ಬೇಕಾಗಿದ್ದಾರೆ ಎಂದು ಹೇಳಿಕೊಂಡಿದ್ದಾನೆ.
ತಾನು ಪಿಜಿಯಲ್ಲಿ ವಾಸಿಸುವುದಾಗಿಯೂ ತಿಳಿಸಿದ್ದಾನೆ. ಆ ಯುವಕನ ವರ್ತನೆ ಬಗ್ಗೆ ಫ್ಲ್ಯಾಟ್ ನ ವಾಚ್ ಮ್ಯಾನ್ ಅನುಮಾನಗೊಂಡು ವಿಚಾರಣೆಗೆ ಮುಂದಾಗುತ್ತಿದ್ದಂತೆ ಉತ್ತರಿಸಲಾಗದ ಆ ಅಪರಿಚಿತ ಯುವಕ ಅಲ್ಲಿಂದ ಏಕಾಏಕಿ ಓಡಲಾರಂಭಿಸಿದ್ದಾನೆ. ಫ್ಲ್ಯಾಟ್ ನ ವಾಚ್ ಮ್ಯಾನ್ ಆ ಅಪರಿಚಿತ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಹೋಗಿದ್ದರಾದರೂ ಹಿಡಿಯಲು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಆ ಅಪರಿಚಿತ ಯುವಕನ ಬಗ್ಗೆ ಅನುಮಾನ ಮೂಡಲಾರಂಭಿಸಿದೆ.
ಈ ಹಿಂದೆ ಕೂಡ ಪ್ರೋ. ನರೇಂದ್ರ ನಾಯಕ್ ಅವರ ಕೊಲೆಗೆ ಯತ್ನಿಸಲಾಗಿತ್ತು ಎಂದು ಹೇಳಲಾಗಿದ್ದು, ಈ ಕುರಿತು ನರೇಂದ್ರ ನಾಯಕ್ ಅವರೇ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರೊ. ನರೇಂದ್ರ ನಾಯಕ್ ಅವರಿಗೆ ಜೀವ ಭಯ ಇರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಇಬ್ಬರು ಗನ್ ಮ್ಯಾನ್ ಒದಗಿಸಿತ್ತು.
ಆದರೆ ಇತ್ತೀಚೆಗೆ ಒಬ್ಬ ಗನ್ ಮ್ಯಾನ್ ನನ್ನು ಇಲಾಖೆ ಹಿಂಪಡೆದಿದೆ. ಸದ್ಯ ಕೇರಳ ಪ್ರವಾಸದಲ್ಲಿದ್ದ ನರೇಂದ್ರ ನಾಯಕ್ ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಫ್ಲ್ಯಾಟ್ ನಲ್ಲಿ ನಡೆದಿರುವ ಘಟನೆ ಕುರಿತು ಮಾಹಿತಿ ಪಡೆದು ನರೇಂದ್ರ ನಾಯಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ .
Comments are closed.