ಮಂಗಳೂರು, ಜೂನ್.14: ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಅವರು ಗುರುವಾರ ಮಂಗಳೂರಿಗೆ ಆಗಮಿಸಿ ಮಳೆ-ಬೆಳೆ ಪರಿಸ್ಥಿತಿ, ಮಳೆಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಬಳಿಕ ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್, ಸಚಿವ ಯುಟಿ ಖಾದರ್ ಹಾಗೂ ಅಧಿಕಾರಿಗಳೊಂದಿಗೆ ನಗರದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶ ಹಾಗೂ ಮನೆಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು. ನಗರದ ಬಿಜೈ ಆನೆಗುಂಡಿ ಎಂಬಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮರ ಬಿದ್ದು ಬಹುತೇಕವಾಗಿ ಹಾನಿಗೊಳಗಾಗಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸಾಂತ್ವನ ಹೇಳಿದರು. ಬಳಿಕ ತುರ್ತು ಪರಿಹಾರವಾಗಿ ತಲಾ 1,1900 ರೂ.ಗಳನ್ನು ಆ ಮನೆಗಳ ಮಾಲಕರಾದ ಭವಾನಿ ಹಾಗೂ ಅನುರಾಧ ಎಂಬವರಿಗೆ ಹಸ್ತಾಂತರಿಸಿದರು.
ಬಳಿಕ ಸಚಿವರು ಸೋಮೇಶ್ವರ- ಉಚ್ಚಿಲ ಹಾಗೂ ಉಳ್ಳಾಲದ ಸಮುದ್ರ ತೀರದಲ್ಲಿ ಕಡಲ್ಕೊರೆತ ಸಮಸ್ಯೆ ಪರಿಹಾರಕ್ಕಾಗಿ ನಡೆಸಲಾದ ತಡೆಗೋಡೆ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದರು. ಈ ಸಂದರ್ಭ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಮೇಯರ್ ಭಾಸ್ಕರ ಮೊಯ್ಲಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಶಶಿಧರ ಹೆಗ್ಡೆ ಹಾಗೂ ಇತರರ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. ಈ ವೇಳೆ ಸುದ್ಧಿಗಾರರ ಜೊತೆ ಮಾತನಾಡಿದ ಸಚಿವರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಮರ, ಮನೆಗಳು ಕುಸಿದು, ಸರಕಾರಿ ಹಾಗೂ ಖಾಸಗಿ ಆಸ್ತಿಗಳಿಗೆ ಹಾನಿಯಾಗಿದೆ. ಅದನ್ನು ವೀಕ್ಷಿಸುವ ಸಲುವಾಗಿ ನಾನು ಮಂಗಳೂರಿಗೆ ಭೇಟಿ ನೀಡಿದ್ದೇನೆ.
ಪ್ರಾಕೃತಿಕ ವಿಕೋಪದಿಂದಾಗಿ ಮನೆಗಳಿಗೆ ಸಂಪೂರ್ಣ ಅಥವಾ ಭಾಗಶ: ಹಾನಿಯಾಗಿದ್ದಲ್ಲಿ ಪರಿಹಾರವಾಗಿ ಸಿಗುವ ಮೊತ್ತ ಕಡಿಮೆ. ಅದನ್ನು ಯಾವ ರೀತಿಯಲ್ಲಿ ಹೆಚ್ಚಿಸಬಹುದು ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಕೆಲವರು ಬಾಡಿಗೆ ಮನೆಯಲ್ಲಿದ್ದಾರೆ. ಅವರಿಗೆ ಸಿಕ್ಕಿಲ್ಲ. ಅವರಿಗೂ ಯಾವ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯ ಎಂಬುದನ್ನು ನಿರ್ಣಯಿಸಲಾಗುವುದು. ಇದು ಮಾನವೀಯತೆಯ ಪ್ರಶ್ನೆ ಎಂದು ಸಚಿವರು ಹೇಳಿದರು.
ಮಂಗಳೂರಿಗೆ ಆಗಮಿಸುವ ಮುಂಚಿತವಾಗಿ ಪ್ರಾಕೃತಿಕ ವಿಕೋಪ ಹಾನಿಯ ಸಂದರ್ಭದಲ್ಲಿ ತುರ್ತು ಪರಿಹಾರಕ್ಕಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ತಲಾ 3 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದ ಸಚಿವರು, ಪ್ರಾಕೃತಿಕ ವಿಕೋಪದ ಪರಿಹಾರವಾಗಿ ಪ್ರತಿಯೊಂದು ಜಿಲ್ಲಾಧಿಕಾರಿ ಕನಿಷ್ಠ 5 ಕೋಟಿ ರೂ. ಮೀಸಲಿಡುವಂತೆ ಹಾಗೂ ತುರ್ತು ಪರಿಹಾರ ಕ್ರಮಗಳು ಯುದ್ಧೋಪಾದಿಯಲ್ಲಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
Comments are closed.