ಕರಾವಳಿ

ಹುಸೈನಬ್ಬ ಕೊಲೆ ಪ್ರಕರಣದಲ್ಲಿ ಮೂವರಿಗೆ ಜಾಮೀನು; ಎಸ್ಐಗೆ ಸಿಕ್ಕಿಲ್ಲ ಜಾಮೀನು

Pinterest LinkedIn Tumblr

ಉಡುಪಿ: ದನದ ವ್ಯಾಪಾರಿ ಹುಸೇನಬ್ಬ (62) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಒಟ್ಟು 11 ಮಂದಿ ಆರೋಪಿಗಳ ಪೈಕಿ ಹಿರಿಯಡ್ಕ ಎಸ್ಸೈ ಡಿ.ಎನ್. ಕುಮಾರ್ ಹಾಗೂ ಪ್ರಮುಖ ಆರೋಪಿ ಸುರೇಶ್ ಮೆಂಡನ್ ಯಾನೆ ಸೂರಿ ಸೇರಿದಂತೆ ಎಂಟು ಮಂದಿಯ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತಿರಸ್ಕರಿಸಿ ಆದೇಶ ನೀಡಿದೆ.

ಉಳಿದ ಆರೋಪಿಗಳಾದ ಹಿರಿಯಡ್ಕ ಪೊಲೀಸ್ ಠಾಣೆಯ ಹೆಡ್‌ಕಾನ್ ಸ್ಟೇಬಲ್ ಮೋಹನ್ ಕೊತ್ವಾಲ್, ಬಜರಂಗದಳದ ಮುಖಂಡ ಪ್ರಸಾದ್ ಕೊಂಡಾಡಿ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ತುಕಾರಾಮ್‌ಗೆ ನಿರೀಕ್ಷಣಾ ಜಾಮೀನು ನೀಡಿ ಆದೇಶ ನೀಡಲಾಗಿದೆ. ಕೊತ್ವಾಲ್ ಪರ ವಕೀಲ ವಿಜಯ ಕುಮಾರ್ ಶೆಟ್ಟಿ ಹಾಗೂ ಉಳಿದಿಬ್ಬರ ಪರ ಮಟ್ಟಾರು ರತ್ನಾಕರ ಹೆಗ್ಡೆ ವಾದಿಸಿದ್ದರು.

ನ್ಯಾಯಾಂಗ ಬಂಧನದಲ್ಲಿರುವ ಮೂವರು ಪೊಲೀಸರು ಜೂ.6ರಂದು ಹಾಗೂ ಏಳು ಮಂದಿ ಬಜರಂಗದಳದ ಕಾರ್ಯಕರ್ತರು ಜೂ.11ರಂದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಓರ್ವ ಆರೋಪಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು. ಇದಕ್ಕೆ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಆಕ್ಷೇಪಣೆ ಸಲ್ಲಿಸಿದ್ದರು.

ಆರೋಪಿ ಪರ ವಕೀಲರ ವಾದ ಹಾಗೂ ಅಭಿಯೋಜಕಿಯ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಹಿರಿಯಡ್ಕ ಎಸ್ಸೈ ಡಿ.ಎನ್. ಕುಮಾರ್, ಠಾಣಾ ಜೀಪು ಚಾಲಕ ಗೋಪಾಲ್, ಬಜರಂಗದಳದ ಸುರೇಶ್ ಮೆಂಡನ್, ಚೇತನ್ ಆಚಾರ್ಯ, ಶೈಲೇಶ್ ಶೆಟ್ಟಿ, ಗಣೇಶ್ ನಾಯ್ಕ, ಉಮೇಶ್ ಶೆಟ್ಟಿ, ರತನ್ ಪೂಜಾರಿ ಎಂಬವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿದರು. ಎಸ್ಸೈ ಪರ ವಕೀಲ ಶಾಂತರಾಮ್ ಶೆಟ್ಟಿ, ಗೋಪಾಲ ಪರ ಎ.ಸಂಜೀವ, ಉಳಿದ ಆರೋಪಿಗಳ ಪರ ಮಟ್ಟಾರು ರ್ನಾಕರ ಹೆಗ್ಡೆ ವಾದ ಮಂಡಿಸಿದ್ದರು.

ಜಾಮೀನು ದೊರೆತ ಹೆಡ್‌ಕಾನ್‌ಸ್ಟೇಬಲ್ ಮೋಹನ್ ಕೋತ್ವಾಲ್ ವಿರುದ್ಧ ಸಾಕ್ಷನಾಶ ಹಾಗೂ ಪ್ರಸಾದ್ ಕೊಂಡಾಡಿ ಹಾಗೂ ತುಕಾರಾಮ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಇನ್ನೊರ್ವ ಆರೋಪಿ ದಿನೇಶ್ ಮೆಂಡನ್‌ಗೆ ನಿರೀಕ್ಷಣಾ ಜಾಮೀನು ಕೋರಿ ವಕೀಲ ಮಟ್ಟಾರ್ ರತ್ನಾಕರ ಹೆಗ್ಡೆ ಜೂ.19ರಂದು ಅರ್ಜಿ ಸಲ್ಲಿಸಲಿದ್ದಾರೆ.

ಈ ಪ್ರಕರಣದಲ್ಲಿ ಮೂವರು ಪೊಲೀಸರು ಸೇರಿದಂತೆ ಒಟ್ಟು 16 ಮಂದಿ ಆರೋಪಿಗಳನ್ನು ಗುರುತಿಸಲಾಗಿದ್ದು, ಇವರಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ. ತುಕಾರಾಮ್, ದಿನೇಶ್ ಮೆಂಡನ್ ಸೇರಿದಂತೆ ಒಟ್ಟು ಐವರು ತಲೆಮರೆಸಿಕೊಂಡಿದ್ದಾರೆ. ಬಂಧಿತರಲ್ಲಿ ಹುಸೇನಬ್ಬರಿಗೆ ದನ ಮಾರಾಟ ಮಾಡಿ ಕೊಲೆ ಪ್ರಕರಣದಲ್ಲೂ ಭಾಗಿಯಾದ ಆರೋಪ ಹೊಂದಿದ ದೀಪಕ್ ಹೆಗ್ಡೆ ಮಂಗಳೂರು ಜೈಲಿನಲ್ಲಿದ್ದಾರೆ.

ಚುರುಕುಗೊಂಡ ಸಿಐಡಿ ತನಿಖೆ…
ಹುಸೇನಬ್ಬ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ತನಿಖೆ ಆರಂಭಗೊಂಡಿದೆ. ಜೂ.17ರಂದು ರಾತ್ರಿ ಉಡುಪಿಗೆ ಆಗಮಿಸಿದ ಸಿಐಡಿ ಡಿವೈಎಸ್ಪಿ ಚಂದ್ರ ಶೇಖರ್ ನೇತೃತ್ವದ ತಂಡವು ಪೊಲೀಸ್ ಇಲಾಖೆಯಿಂದ ಪ್ರಕರಣದ ಕಡತ ಪಡೆದುಕೊಂಡಿದೆ. ಹಿರಿಯಡ್ಕ ಪೊಲೀಸ್ ಠಾಣೆ ಹಾಗೂ ಕೊಲೆ ನಡೆದ ಸ್ಥಳಗಳಿಗೆ ತೆರಳಿ ತನಿಖೆ ನಡೆಸಿರುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ. ಹುಸೇನಬ್ಬ ಸಾವು ಹಿರಿಯಡ್ಕ ಪೊಲೀಸರ ಜೀಪಿನಲ್ಲಿ ಆಗಿರುವುದರಿಂದ ಇದನ್ನು ಪೊಲೀಸ್ ಕಸ್ಟಡಿಯ ಸಾವು ಎಂದು ಪರಿಗಣಿಸಲಾಗಿದ್ದು, ಹೀಗಾಗಿ ಈ ಪ್ರಕರಣದ ತನಿಖೆಯು ಸ್ವಯಂ ಆಗಿ ಸಿಐಡಿಗೆ ವರ್ಗಾವಣೆಗೊಂಡಿದೆ.

Comments are closed.