ಕರಾವಳಿ

ಗುರುಪುರ ವಜ್ರದೇಹಿ ಸ್ವಾಮೀಜಿಯವರಿಂದ ಲವ್ ಜಿಹಾದ್ ವಿರುದ್ಧ ರಾಷ್ಟ್ರಮಟ್ಟದ ‘ಹಿಂದೂ ಟಾಸ್ಕ್ ಫೋರ್ಸ್’ ಸ್ಥಾಪನೆ

Pinterest LinkedIn Tumblr

 

ಮಂಗಳೂರು, ಜೂನ್.25: ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿದೆ ಎನ್ನಲಾದ ಹಿಂದೂ ಯುವತಿಯರ ಬಲವಂತದ ಮತಾಂತರ ‘ಲವ್ ಜಿಹಾದ್’ ವಿರುದ್ಧ ಫೈರ್ ಬ್ರಾಂಡ್ ಸ್ವಾಮೀಜಿಯೊಬ್ಬರು ತೊಡೆತಟ್ಟಿ ನಿಂತಿದ್ದಾರೆ. ಕೆಲವು ತಿಂಗಳ ಹಿಂದೆ ಲವ್ ಜಿಹಾದ್ ವಿರುದ್ಧ ‘ಹಿಂದೂ ಟಾಸ್ಕ್ ಫೋರ್ಸ್’ ಅಸ್ತಿತ್ವಕ್ಕೆ ತರುವುದಾಗಿ ಹೇಳಿದ್ದ ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಅವರು, ರಾಷ್ಟ್ರಮಟ್ಟದಲ್ಲಿ ಸಂಘಟನೆಯನ್ನು ರಚನೆ ಮಾಡಿದ್ದಾರೆ. ಪ್ರತ್ಯೇಕ ರಾಜ್ಯಗಳ ಸದಸ್ಯರನ್ನೊಳಗೊಂಡ ಒಟ್ಟು ೨೨ ಮಂದಿಯ ರಾಷ್ಟ್ರಮಟ್ಟದ ಸಂಘಟನೆಯನ್ನು ಸ್ಥಾಪಿಸಿರುವ ಸ್ವಾಮೀಜಿ ಈ ಕುರಿತು ಮಾಧ್ಯಮವೊಂದರ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಹಿಂದೂ ಹೆಣ್ಮಕ್ಕಳನ್ನು ಗುರಿಯಾಗಿಸಿಕೊಂಡು ಬಲವಂತದ, ಆಮಿಷವೊಡ್ಡುವ ಮೂಲಕ ಮತಾಂತರಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದರ ಹಿಂದೆ ಮತಾಂಧ ಶಕ್ತಿಗಳು ಕಾರ್ಯೋನ್ಮುಖವಾಗಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಹಿಂದೂ ಧರ್ಮ ರಕ್ಷಣೆ ಮತ್ತು ಲವ್ ಜಿಹಾದ್ ತಡೆಯಲು ಹಿಂದೂ ಟಾಸ್ಕ್‌ಫೋರ್ಸ್ ಅನ್ನು ರಚನೆ ಮಾಡಲಾಗಿದೆ.

ಹಿಂದೂ ಧರ್ಮದ ಮೇಲೆ ಬುದ್ಧಿಜೀವಿಗಳ ಆಕ್ರಮಣ ಹಾಗೂ ಮತಾಂತರ ಕಿರುಕುಳ ಎರಡನ್ನೂ ತಡೆಯಲು ಈ ಫೋರ್ಸ್ ಸನ್ನದ್ಧವಾಗಿದೆ. ಮುಸ್ಲಿಂ-ಕ್ರೈಸ್ತರಿಗೆ ಪ್ರತ್ಯೇಕ ಕಾನೂನು ಜಾರಿಯಲ್ಲಿದೆ, ಆದರೆ ಹಿಂದೂಗಳಿಗೆ ಪ್ರತ್ಯೇಕ ಕಾನೂನು ಎನ್ನುವುದು ಇಲ್ಲ. ಇದಕ್ಕಾಗಿ ಪ್ರತ್ಯೇಕ ಲಾ ಬೋರ್ಡ್ ಸ್ಥಾಪನೆಗೆ ಆಂದೋಲನ ಪ್ರಾರಂಭಿಸಲಾಗಿದೆ. ಈಗಾಗಲೇ ಇದರ ಕಾರ್ಯಚಟುವಟಿಕೆ ಆರಂಭಗೊಂಡಿದ್ದು ಸಂಘಟನೆ ಈ ನಿಟ್ಟಿನಲ್ಲಿ ಕಾನೂನು ಹೋರಾಟವನ್ನೂ ನಡೆಸಲಿದೆ’ ಎಂದು ಗುರುಪುರ ಸ್ವಾಮೀಜಿ ತಿಳಿಸಿದ್ದಾರೆ.

‘ಹಿಂದೂ ಧರ್ಮದ ಚೈತನ್ಯ, ಕ್ರಿಯಾಶೀಲತೆ ಕುರಿತು ಹಿಂದೂ ಯುವಕರಲ್ಲಿ ಅರಿವು ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಕಾರ್ಯಾಗಾರ ಕೈಗೊಳ್ಳಲಾಗುತ್ತಿದೆ. ಹಿಂದೂ ಟಾಸ್ಕ್ ಫೋರ್ಸ್ ಹಿಂದೂ ಧರ್ಮವನ್ನು ಗೌರವಿಸುವ ಎಲ್ಲರಿಗೂ ಗೌರವ ನೀಡಲಿದೆ. ಈಗಾಗಲೇ ಕಾನೂನು ಪಂಡಿತರು, ವೈದ್ಯರು, ಸಮಾಜಸೇವೆಯಲ್ಲಿ ಒಳಗೊಂಡವರನ್ನು ಸೇರಿಸಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ.

ಉತ್ತರಾಖಂಡ್, ಪಂಜಾಬ್, ಛತ್ತೀಸ್‌ಗಢ ರಾಜ್ಯಗಳಲ್ಲಿ ಸಂಘಟನೆ ರಚನೆಗೆ ಆಹ್ವಾನ ಬಂದಿದೆ. ಸಂಘಟನೆ ಫೇಸ್‌ಬುಕ್, ವಾಟ್ಸ್ ಆಪ್, ಟ್ವಿಟರ್ ಮೂಲಕ ಸಕ್ರಿಯ ಸದಸ್ಯರನ್ನು ಹೊಂದಿದ್ದು ಅದಕ್ಕಾಗಿ ತಲಾ ೧೦ ಮಂದಿಯನ್ನು ಒಳಗೊಂಡ ಪ್ರತ್ಯೇಕ ಗುಂಪು ರಚಿಸಲಾಗಿದೆ. ಸಂಘಟನೆ ಸೇರುವವರು ಆಧಾರ್ ಕಾರ್ಡ್ ಅನ್ನು ಕಡ್ಡಾಯ ಲಿಂಕ್ ಮಾಡಬೇಕಿದ್ದು ಸದಸ್ಯರಿಗೆ ಕೆಲವೊಂದು ನಿಬಂಧನೆಗಳನ್ನೂ ವಿಧಿಸಲಾಗಿದೆ’ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಕರಾವಳಿಯಲ್ಲಿ ಕೆಲಸಮಯಗಳಿಂದ ಅಲ್ಲಲ್ಲಿ ಬೆಳಕಿಗೆ ಬರುತ್ತಿರುವ ಹಿಂದೂ ಯುವತಿಯರ ಅತ್ಯಾಚಾರ, ಡ್ರಗ್ಸ್ ಮಾಫಿಯಾ, ಪ್ರೀತಿ-ಪ್ರೇಮ, ಮತಾಂತರ ಇದೆಲ್ಲದರ ಹಿಂದೆ ‘ಲವ್ ಜಿಹಾದ್’ ಅನ್ನೋ ಉಗ್ರರ ಕುತಂತ್ರ ಅಡಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸುತ್ತಲೇ ಬಂದಿದ್ದವು. ಪೊಲೀಸ್ ಇಲಾಖೆ ಬಹುತೇಕ ಪ್ರಕರಣಗಳ ಬೆನ್ನುಬಿದ್ದಿದ್ದರೂ ಇದಕ್ಕೆ ಪೂರಕ ಸಾಕ್ಷ್ಯ ಸಂಗ್ರಹಿಸಲು ಎಡವಿತ್ತು ಅನ್ನೋ ಸಂಘಟನೆಗಳ ಆರೋಪದ ಮಧ್ಯೆಯೇ ಸ್ವಾಮೀಜಿಯೊಬ್ಬರು ಈ ರೀತಿ ಧರ್ಮರಕ್ಷಣೆಗೆ ಮುಂದಾಗಿರುವುದು ಜಿಲ್ಲೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.

Comments are closed.