ಕರಾವಳಿ

ಸಚಿವ ಸ್ಥಾನವನ್ನು ನಿಭಾಯಿಸಲಾಗದ ಅರಣ್ಯ ಸಚಿವರನ್ನು ಕಾಡಿಗೆ ಕಳುಹಿಸಿದ ಮತದಾರರು : ರೈ ಅವರ ಸೊಂಬೇರಿ ಹೇಳಿಕೆಗೆ ಸಂಸದ ನಳಿನ್ ಕುಮಾರ್ ತಿರುಗೇಟು

Pinterest LinkedIn Tumblr

ಮಂಗಳೂರು, ಜೂನ್ 03: ರಾಜ್ಯದ ಜನರಿಗೆ ಅದರಲ್ಲೂ ದಕ್ಷಿಣ ಕನ್ನಡದ ಜನರಿಗೆ ಜನಪ್ರತಿನಿಧಿಗಳಲ್ಲಿ ಯಾರು ಅತ್ಯಂತ ಸೊಂಬೇರಿ ಎಂಬುದು ಗೊತ್ತಿದೆ.. ಅದಕ್ಕಾಗಿಯೇ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಮಾನಾಥ ರೈ ಅವರನ್ನು ಜನರು ನಿದ್ರಿಸಲು ಮನೆಗೆ ಕಳುಹಿಸಿದ್ದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ್ ರೈ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿ ನಳಿನ್ ಕುಮಾರ್ ಕಟೀಲ್ ಒಬ್ಬ ಅತ್ಯಂತ ಸೊಂಬೇರಿ ಸಂಸದ, ಸದಾಕಾಲ ಮಂಗಳೂರಿನ ಸರ್ಕಿಟ್ ಹೌಸ್ ನಲ್ಲಿ ನಳಿನ್ ಮಲಗಿರುತ್ತಾರೆ ಎಂದು ಅಪಹಾಸ್ಯ ಮಾಡಿದ್ದರು. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ರೈ ಅವರಿಗೆ ತಿರುಗೇಟು ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಸಚಿವ ಸ್ಥಾನವನ್ನು ನಿಭಾಯಿಸಲಾಗದ ಅರಣ್ಯ ಸಚಿವರನ್ನು ಚುನಾವಣೆಯಲ್ಲಿ ಸೋಲಿಸಿ ಜನರು ಅವರನ್ನ ಕಾಡಿಗೆ ಕಳುಹಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದ ನಳಿನ್ ಕುಮಾರ್ ರಮಾನಾಥ್ ರೈ ಗಳ ಆರೋಪಗಳಿಗೆ ನಾನು ಕಿವಿಗೊಡಲ್ಲ. ಕಳೆದ 30 ವರ್ಷಗಳಲ್ಲಿ ತಾನು ಸಚಿವನಾಗಿದ್ದೇ ಎನ್ನುವುದೇ ಅವರ ಸಾಧನೆ. ಏನೂ ಕೆಲಸ ಇಲ್ಲದವರು ಈ ರೀತಿ ಹೇಳಿಕೆ ನೀಡುತ್ತಾರೆ ಎಂದು ರೈ ಅವರಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್‌ನಲ್ಲಿ ಅಸ್ಥಿರತೆ ಮತ್ತು ಭಯದ ವಾತವರಣ ಆರಂಭ : 

ಇದೇ ವೇಳೆ ಸಚಿವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ನೀಡಿರುವ ಹೇಳಿಕೆ ಬಗ್ಗೆ ಸುದ್ಧಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಬಿಜೆಪಿಯ ಬಾಗಿಲು ತಟ್ಟುತ್ತಾರೆಯೇ ಹೊರತು ಬಿಜೆಪಿಯವರು ಕಾಂಗ್ರೆಸ್ ಬಾಗಿಲು ತಟ್ಟುವ ಅವಶ್ಯಕತೆ ಅಥವಾ ಅನಿವಾರ್ಯತೆಯೂ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಅಸ್ಥಿರತೆ ಮತ್ತು ಭಯದ ವಾತವರಣ ಆರಂಭವಾಗಿದೆ. ಅವರಿಗೆ ಒಂದು ಕಡೆ ಸರ್ಕಾರ ಬೀಳುತ್ತೆ ಎನ್ನುವ ಭಯ, ಮತ್ತೊಂದೆಡೆ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದೇ ಕಾರಣ ಎಂದರು. ಮುಂದೆ ಕಾಂಗ್ರೆಸ್ ಸರ್ವನಾಶವಾಗಿ ಕಾಂಗ್ರೆಸ್ ಇರುವುದಿಲ್ಲ ಎಂಬ ಭಯ ಆ ಪಕ್ಷದ ಮುಖಂಡರನ್ನು ಕಾಡುತ್ತಿದೆ. ಅದಕ್ಕಾಗಿ ತಮ್ಮ ಮಾನಸಿಕ ಅಸ್ಥಿರತೆಯನ್ನು ಸಮಾಜದ ಮೇಲೆ ಬೀರುವಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಕಟೀಲು ಹೇಳಿದರು.

Comments are closed.