ಕರಾವಳಿ

ಬೈಂದೂರು: ಮದುವೆ ಮನೆಗೆ ಬೆಂಕಿಯಿಟ್ಟ ದುಷ್ಟರ ಅಪರಾಧ ಸಾಭೀತು; ಜುಲೈ 7ಕ್ಕೆ ಶಿಕ್ಷೆ ಪ್ರಕಟ

Pinterest LinkedIn Tumblr

ಕುಂದಾಪುರ: ರಸ್ತೆ ಜಾಗದ ತಕಾರರು, ಪೂರ್ವ ದ್ವೇಷದ ಹಿನ್ನೆಲೆ ಸಂಬಂಧಿಗಳ ಮನೆಗೆ ಬೆಂಕಿಯಿಟ್ಟ ಇಬ್ಬರ ಆರೋಪಗಳು ಸಾಭೀತಾಗಿದ್ದು ಅಪರಾಧಿಗಳಿಗೆ ಜುಲೈ 7ರಂದು ಶಿಕ್ಷೆ ಪ್ರಕಟವಾಗಲಿದೆ. ಇಬ್ಬರ ವಿರುದ್ಧ ಹೊರಿಸಲಾದ ಆರೋಪಣೆಗಳು ಸಾಭೀತಾದ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿನ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ದೋಷಿಗಳೆಂದು ಮಹತ್ವದ ತೀರ್ಪು ನೀಡಿದ್ದಾರೆ. ಬೈಂದೂರು ತೆಗ್ಗರ್ಸೆಯ ಅರಳಿಕಟ್ಟೆ ನಿವಾಸಿಗಳಾದ ರಾಜೇಶ್ ಶೆಟ್ಟಿ ಯಾನೆ ರಾಜೇಂದ್ರ (35), ರಾಘವೇಂದ್ರ ಶೆಟ್ಟಿ(33) ಅಪರಾಧಿಗಳು.

(ರಾಜೇಶ್ ಶೆಟ್ಟಿ ಯಾನೆ ರಾಜೇಂದ್ರ, ರಾಘವೇಂದ್ರ ಶೆಟ್ಟಿ)

ಮೂರು ವರ್ಷದ ಹಿಂದೆ…….
ಅಂದು 2015, ಎಪ್ರಿಲ್ 22. ಬೈಂದೂರು ತೆಗ್ಗರ್ಸೆಯ ಅರಳಿಕಟ್ಟೆಯಲ್ಲಿನ ಕುಶಲ ಶೆಟ್ಟಿಯವರ ಮಗನ ಮದುವೆ ಸಮಾರಂಭವು ಉಪ್ಪುಂದದ ಸಭಾಗೃಹದಲ್ಲಿ ನಡೆಯುತ್ತಿದ್ದ ಹಿನ್ನೆಲೆ ಸ್ಥಳೀಯ ಮಹಿಳೆಯೋರ್ವರನ್ನು ಮನೆಯಲ್ಲಿ ಉಳಿಸಿ ಮನೆಮಂದಿ ಮದುವೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲವೆಂದು ತಿಳಿದ ಸಹೋದರರಾದ ರಾಜೇಶ್ ಶೆಟ್ಟಿ ಹಾಗೂ ರಾಘವೇಂದ್ರ ಮನೆಗೆ ಬೆಂಕಿ ಹಚ್ಚಿ ಹಾನಿಗೊಳಿಸುವ ದುರುದ್ದೇಶದಿಂದ ಕುಶಲ ಶೆಟ್ಟಿ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಮಹಿಳೆಯನ್ನು ಬೆದರಿಕೆ ಹಾಕಿ ಮನೆಯ ಬಾಗಿಲು ಒಡೆದು ಒಳನುಗ್ಗಿ ಮನೆಯಲ್ಲಿದ್ದ ಸೊತ್ತುಗಳನ್ನು ಹಾನಿ ಮಾಡಿ ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಮನೆ ಹೊರಗಿನ ಚಪ್ಪರ, ತಳಿರು ತೋರಣಗಳನ್ನು ಧ್ವಂಸ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಸಂಜೆ ವೇಳೆಗೆ ಮನೆಯವರು ವಾಪಾಸ್ಸಾದಾಗ ಘಟನೆ ಬೆಳಕಿಗೆ ಬಂದಿದ್ದು ಬೈಂದೂರು ಪೊಲೀಸರಿಗೆ ದೂರು ನೀಡಲಾಗಿತ್ತು.

(File Pics)

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈರ್ವರನ್ನು ಬಂಧಿಸಿದ್ದು ಕೆಲವೇ ದಿನಗಳಲ್ಲಿ ಆರೋಪಿಗಳು ಜಾಮೀನು ಪಡೆದಿದ್ದರು. ಆರೋಪಿಗಳ ವಿರುದ್ಧ ಅಂದಿನ ಬೈಂದೂರು ಎಸ್ಐ ಸಂತೋಷ್ ಕಾಯ್ಕಿಣಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇಬ್ಬರು ಸಹೋದರರು ಮಾಡಿದ್ದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕರಾದ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

ಇದನ್ನೂ ಓದಿರಿ: ಮದುವೆ ಮನೆಗೆ ಬೆಂಕಿಯಿಟ್ಟ ದುರುಳ ಸೋದರರು| ಇದಕ್ಕೆ ಹಿರಿಯನೊಬ್ಬನ ಕುಮ್ಮಕ್ಕು| ಸ್ವಂತ ಚಿಕ್ಕಮ್ಮನ ಮನೆಗೇ ಬೆಂಕಿಯಿಟ್ಟು, ಮನೆ ವಸ್ತುಗಳ ಧ್ವಂಸ | ಮೂವರು ಅರೆಸ್ಟ್

(ವರದಿ- ಯೋಗೀಶ್ ಕುಂಭಾಸಿ)

Comments are closed.