ಕರಾವಳಿ

ಜುಲೈ 12ರಿಂದ ಸೆ. 30ರವರೆಗೆ ಮಂಗಳೂರು To ಮುಂಬೈ ಏರ್‌ ಇಂಡಿಯಾ ವಿಮಾನಯಾನ ದಿಢೀರ್ ರದ್ದು : ಬುಕ್ಕಿಂಗ್ ಗ್ರಾಹಕರಿಗೆ ಸಂಕಷ್ಟ

Pinterest LinkedIn Tumblr

ಮಂಗಳೂರು, ಜುಲೈ.06: ಮಂಗಳೂರು- ಮುಂಬೈ ನಡುವಿನ ವಿಮಾನಯಾನ ಸೇವೆಯನ್ನು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು ಜುಲೈ 12ರಿಂದ ಸೆ. 30ರವರೆಗೆ ದಿಢೀರನೆ ರದ್ದುಗೊಳಿಸಿದೆ.ನಿರ್ವಹಣೆಯ ಕಾರಣಗಳಿಗಾಗಿ 81 ದಿನಗಳ ಕಾಲ ಮಂಗಳೂರು- ಮುಂಬೈ ನಡುವಿನ ವಿಮಾನ ಯಾನವನ್ನು ರದ್ದುಪಡಿಸ‌ಲಾಗಿದೆ.

ಜೂ. 25ರ ತನಕವೂ ಏರ್‌ ಇಂಡಿಯಾ ಸಂಸ್ಥೆಯು ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಿತ್ತು. ಜೂ. 26ರಂದು ಮಂಗಳೂರು- ಮುಂಬೈ ವಿಮಾನಯಾನವನ್ನು ಜುಲೈ 12ರಿಂದ ರದ್ದು ಮಾಡುತ್ತಿರುವುದಾಗಿ ಟಿಕೆಟ್‌ ಬುಕ್‌ ಮಾಡಿದವರಿಗೆ ದಿಢೀರನೆ ಏರ್‌ ಇಂಡಿಯಾ ಕಡೆಯಿಂದ ಸಂದೇಶ ರವಾನೆಯಾಗಿದೆ. ಟಿಕೆಟ್‌ ಬುಕ್‌ ಮಾಡಿದವರಿಗೆ ಏರ್‌ ಇಂಡಿಯಾ ಸಂಸ್ಥೆಯು ಪ್ರಯಾಣ ಕೈಗೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಬದಲಾಗಿ ಟಿಕೆಟ್‌ ಹಣವನ್ನು ಪೂರ್ತಿ ಮರು ಪಾವತಿಸಲು ಅವಕಾಶ ಕಲ್ಪಿಸಿದೆ.

ಏರ್‌ ಇಂಡಿಯಾವು ಮಂಗಳೂರು-ಮುಂಬೈ ನಡುವೆ ಪ್ರತಿದಿನ ಮಧ್ಯಾಹ್ನ 12.45ಕ್ಕೆ ಒಂದು ಟ್ರಿಪ್‌ ಸಂಚರಿಸುತ್ತಿದೆ. ಬೇರೆ ವಿಮಾನಯಾನಗಳಿಗೆ ಹೋಲಿಸಿದರೆ ಇದರಲ್ಲಿ ಪ್ರಯಾಣ ದರ ಸ್ವಲ್ಪ ಕಡಿಮೆ. ಜತೆಗೆ ಕರಾವಳಿ ಭಾಗದ ಹೆಚ್ಚಿನ ಸಂಖ್ಯೆಯ ಜನರು ಮುಂಬೈನಲ್ಲಿ ನೆಲೆಸಿರುವುದರಿಂದ ಅಲ್ಲಿಗೆ ಹೋಗಿ ಬರಲು ಈ ವಿಮಾನವನ್ನೇ ಅವಲಂಬಿಸಿದ್ದಾರೆ.

ಸಾಕಷ್ಟು ಮುಂಚಿತವಾಗಿ ಟಿಕೆಟ್‌ ಬುಕ್‌ ಮಾಡಿದರೆ ಟಿಕೆಟ್‌ ದರದಲ್ಲಿ ಉಳಿತಾಯ ಆಗುವುದರಿಂದ ಹಲವಾರು ಮಂದಿ ಮಂಗಳೂರು- ಮುಂಬೈ- ಮಂಗಳೂರು ಪ್ರಯಾಣಕ್ಕೆ ಟಿಕೆಟ್‌ ಬುಕ್‌ ಮಾಡಿದ್ದರು. ಮಾತ್ರವಲ್ಲದೆ ಈ ವಿಮಾನಕ್ಕೆ ಮುಂಬೈಯಲ್ಲಿ ಸಾಕಷ್ಟು ಸಂಪರ್ಕ ವಿಮಾನಗಳ ಲಭ್ಯತೆಯೂ ಇರುವುದು ಜನತೆ ಪ್ರಯಾಣಕ್ಕೆ ಅನುಕೂಲವಾಗಿತ್ತು.

Comments are closed.