ಕರಾವಳಿ

ಶೀರೂರು ಮೂಲ ಮಠಕ್ಕೆ ಆಗಮಿಸಿದ ಶೀರೂರು ಶ್ರೀ ಪಾರ್ಥೀವ ಶರೀರ: ಬೃಂದಾವನದಲ್ಲಿ ಸಮಾಧಿ

Pinterest LinkedIn Tumblr

ಉಡುಪಿ: ಮಣಿಪಾಲ ಆಸ್ಪತ್ರೆಯಲ್ಲಿ ಮೃತರಾದ ಶೀರೂರು ಶ್ರೀಗಳ ಮರಣೋತ್ತರ ಪರೀಕ್ಷೆ ಮುಗಿದಿದ್ದು ಅಂತಿಮ ಯಾತ್ರೆ ಮತ್ತು ಸಾರ್ವಜನಿಕ ದರ್ಶನ ಪ್ರಕ್ರಿಯೆ ನಡೆಯುತ್ತಿದೆ.

ಉಡುಪಿಯ ಕೃಷ್ಣ ಮಠದಲ್ಲಿ ಶೀರೂರು ಶ್ರೀಗಳ ಪಾರ್ಥಿವ ಶರೀರಕ್ಕೆ ಮಧ್ವ ಸ್ನಾನ, ಕೃಷ್ಣ ದರ್ಶನ ಸೇರಿ ಹಲವು ವಿಧಿ ವಿಧಾನಗಳನ್ನು ಮುಗಿಸಿದ್ದು, ರಥ ಬೀದಿಯಲ್ಲಿ ಮೆರವಣಿಗೆ ಸಹ ಮಾಡಲಾಯಿತು. ಈಗ ಮಠದಿಂದ ಮೂಲಮಠವಾದ ಶೀರೂರು ಮಠದೆಡೆಗೆ ಪಾರ್ಥಿವ ಶವವನ್ನು ತರಲಾಗಿದ್ದು ಇಲ್ಲಿ ಸಕಲ ಧಾರ್ಮಿಕ ವಿಧಿ ನೆರವೇರಿಸಿ ಬೃಂದಾವನದಲ್ಲಿ ಸಮಾಧಿ ಮಾಡಲಾಗುತ್ತದೆ.

ಶ್ರೀಗಳ ದೇಹ ಮರಣೋತ್ತರ ಪರೀಕ್ಷೆಗೆ ಒಳಗಾಗಿರುವ ಕಾರಣ ಶ್ರೀಗಳ ಅಂತಿಮ ಸಂಸ್ಕಾರ ನಿಯಮದ ಪ್ರಕಾರ ಮಧ್ವ ಸರೋವರದಲ್ಲಿ ಸ್ನಾನ ಮಾಡಿಸಲಾಗುತ್ತದೆಯೋ ಇಲ್ಲವೋ ಎಂಬ ಅನುಮಾನ ಏರ್ಪಟ್ಟಿತ್ತು. ಆದರೆ ಶ್ರೀಗಳಿಗೆ ಮಧ್ವ ಸಂಪ್ರದಾಯದ ಪ್ರಕಾರವೇ ಮಠದಲ್ಲಿ ವಿಧಿ ವಿಧಾನ ಪೂರೈಸಲಾಗಿದೆ. ರಥಬಿದಿಯಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಯನ್ನು ಮಾಡಿ ಕನಕನ ಕಿಂಡಿಯ ಮೂಲಕ ದೇವರ ದರ್ಶನ ಮಾಡಿಸಲಾಗಿದೆ.

ಅಷ್ಟಮಠದ ನಿಯಮದ ಪ್ರಕಾರ ಶ್ರೀಗಳು ಮೃತಪಟ್ಟಾಗ ಅವರಿಗೆ ಮಧ್ವ ಸರೋವರದಲ್ಲಿ ಸ್ನಾನ ಮಾಡಿಸಿ, ಆ ನಂತರ ಕೃಷ್ಣನ ದರ್ಶನ ಮಾಡಿಸಿ ಆ ನಂತರ ಮೂಲ ಮಠದಲ್ಲಿ ಬೃಂದಾವನ ನಿರ್ಮಿಸಿ ಅದರಲ್ಲಿ ಹತ್ತಿ, ಉಪ್ಪು ಸೇರಿದಂತೆ ಶ್ರೀಗಳ ಪೂಜೆ ಸಾಮಗ್ರಿಗಳನ್ನು ಇರಿಸಿ ಸಮಾಧಿ ಮಾಡಲಾಗುತ್ತದೆ.

ಹಿರಿಯಡ್ಕದ ಬಳಿ ಇರುವ ಶಿರೂರು ಮೂಲ ಮಠದಲ್ಲಿ ಶ್ರೀಗಳ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ. ಅಲ್ಲಿಯೇ ಶ್ರೀಗಳನ್ನು ಸಮಾಧಿ ಮಾಡಲಾಗುತ್ತದೆ. ಈಗಾಗಲೇ ಶೀರೂರು ಶ್ರೀ ಗಳ ಪಾರ್ಥಿವ ಶರೀರವನ್ನು ಹೂವಿನಿಂದ ಅಲಂಕೃತ ವಾಹನದಲ್ಲಿ ಇರಿಸಿ ಮೂಲಮಠಕ್ಕೆ ಕರೆತರಲಾಗಿದೆ.

Comments are closed.