ಕರಾವಳಿ

ವಿಠ್ಠಲ..ವಿಠ್ಠಲ…ಎಂದಿದ್ದಕ್ಕೆ ವಿರೋಧಿಗಳಿಂದ ವಿಷವುಂಡರೇ ಶ್ರೀಗಳು?

Pinterest LinkedIn Tumblr

ಉಡುಪಿ: ಇಲ್ಲಿನ ಅಷ್ಟ ಮಠಗಳಲ್ಲಿ ಒಂದಾದ ಶೀರೂರು ಮಠದ ಸ್ವಾಮೀಜಿಗಳಾಗಿದ್ದ ಲಕ್ಷ್ಮೀಶ್ವರ ತೀರ್ಥ ಸ್ವಾಮಿ ಶ್ರೀಗಳು ನಿನ್ನೆ ಮಣೀಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ರಾತ್ರಿ ವೇಳೆ ಶೀರೂರು ಮೂಲ ಮಠದ ಆವರಣದಲ್ಲಿ ಅವರ ಅಂತಿಮ ವಿಧಿ ನಡೆದಿದೆ. ವಿಭಿನ್ನ, ವಿಶಿಷ್ಟರಾಗಿ ಜನಾನುರಾಗಿ ಸ್ವಾಮೀಜಿಯಾಗಿದ್ದ ಶ್ರೀಗಳ ಬಗ್ಗೆಗಿನ ಕೆಲ ಮಾಹಿತಿಯಿಲ್ಲಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತುತ್ತತುದಿ ಮಡಾಮಕ್ಕಿ ಶ್ರೀಗಳ ಹುಟ್ಟೂರು. ವಿಠಲ ಆಚಾರ್ಯ ಮತ್ತು ತಾಯಿಯ ಹೆಸರು ಕುಸುಮ ಆಚಾರ್ಯ ದಂಪತಿಗಳ ಇಬ್ಬರು ಮಕ್ಕಳಲ್ಲಿ ಇವರೊಬ್ಬರು. 1963ರಲ್ಲಿ ಜನಿಸಿದ ಶಿರೂರು ಶ್ರೀಗಳ ಪೂರ್ವಾಶ್ರಮದ ಹೆಸರು ಹರೀಶ್ ಆಚಾರ್ಯ. ಶೀರೂರು ಮಠದ ಪರಂಪರೆಯ ಮೂವತ್ತನೇ ಯತಿಗಳು. ತಮ್ಮ ಎಂಟನೇ ವಯಸ್ಸಿಗೆ ಅಂದರೆ 1971ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು.

ಸಕಲ ಕಲಾ ವಲ್ಲಭ……
ಶಿರೂರು ಶ್ರೀಗಳು ಸಕಲ ಕಲಾ ವಲ್ಲಭರಾಗಿದ್ದು ಉತ್ತಮ ಈಜುಪಟು ಮತ್ತು ಕರಾಟೆ ಪಟುವಾಗಿದ್ದರು. ಖ್ಯಾತ ಡ್ರಮ್ಸ್ ವಾದಕ ಶಿವಮಣಿಯೊಂದಿಗೆ ಡ್ರಮ್ಸ್ ಜುಗಲ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೂರು ವರ್ಷಗಳ ಹಿಂದೆ ಜಿಲ್ಲಾ ಈಜು ಸ್ಪರ್ಧೆಯಲ್ಲಿ, ಗಂಟೆಗಟ್ಟಲೇ ಸಮುದ್ರದಲ್ಲಿ ಯೋಗಾಸನ ಮಾಡಿ ಸುದ್ದಿಯಾಗಿದ್ದರು. ಸಾಹಿತ್ಯ, ಸಂಗೀತ ಹಾಗೂ ಚಿತ್ರಕಲೆಯಲ್ಲಿಯೂ ಅತೀವ ಆಸಕ್ತಿ ಇವರಿಗಿತ್ತು. ಇತ್ತೀಚಿನ ವಿಧಾನ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿ ನಾಮಪತ್ರವನ್ನೂ ಸಲ್ಲಿಕೆ ಮಾಡಿ ಬಳಿಕ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರು.

ಕೆಲವುಗಳಿಗೆ ವಿರೋಧಿ ಇವರು…
ಜಾತಿ ಆಧಾರಿತವಾಗಿ ಊಟೋಪಚಾರ ನೀಡುವುದಕ್ಕೆ ಶ್ರೀಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತನ್ನ ಪರ್ಯಾಯದ ವೇಳೆ ಪರ್ಯಾಯ ಸ್ವಾಗತ ಸಮಿತಿಗೆ ಮೊಗವೀರ ಸಮುದಾಯವರನ್ನು ನೇಮಿಸಿದ್ದು ಇದನ್ನು ಸ್ವತಃ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನೆನಪಿಸಿಕೊಳ್ಳುತ್ತಾರೆ. ಮಠಗಳಲ್ಲಿ ಬೇಧ, ಇತರೆ ಯತಿಗಳ ಕೆಲವು ವಿಚಾರದಲ್ಲಿ ತನ್ನದೇ ಆದ ವಿಭಿನ್ನ ನಿಲುವು ಹೊಂದಿದ್ದು ಕೆಲವರೊಂದಿಗೆ ಅದನ್ನು ಹಂಚಿಕೊಂಡಿದ್ದರು. ಅಷ್ಠಮಠದ ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ ಎಂದು ಹೇಳಿ ವಿವಾದಕ್ಕೀಡಾಗಿದ್ದರು.

ದೂರದ್ರಷ್ಟಿಯುಳ್ಳ ಶ್ರೀಗಳು..
ಮೂರು ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ್ದ ಶಿರೂರು ಶ್ರೀಗಳು, 1978-80ರಲ್ಲಿ ನಡೆದ ಮೊದಲ ಪರ್ಯಾಯದ ವೇಳೆ ಉಡುಪಿ ಶ್ರೀ ಕೃಷ್ಣ ಮಠದ ಪ್ರವೇಶಧ್ವಾರವನ್ನು ನವೀಕರಿಸಿದ್ದರು. ಇನ್ನು ಎರಡನೇ ಪರ್ಯಾಯದ ವೇಳೆ ಶ್ರೀಗಳು ಶ್ರೀಕೃಷ್ಣ ವಿಗ್ರಹಕ್ಕೆ ಮಾಡಿದ್ದ ನಾನಾ ಬಗೆಯ ವಿಶೇಷ ಅಲಂಕಾರಗಳು ಸಾವಿರಾರು ಭಕ್ತರನ್ನು ಆಕರ್ಷಿಸಿತ್ತು.

ವಿಠಲ..ವಿಠಲ…..
ಶಿರೂರು ಶ್ರೀಗಳು ಅನಾರೋಗ್ಯ ಕಾರಣ ಪೂಜೆ ಸಲ್ಲಿಸಲಾಗುವುದಿಲ್ಲ ಎಂದು ಪಟ್ಟದ ದೇವರ ವಿಗ್ರಹವನ್ನು ಶ್ರೀಕೃಷ್ಣ ಮಠಕ್ಕೆ ಒಪ್ಪಿಸಿದ್ದರು. ವಿಠಲ ಇವರ ಪಟ್ಟದ ದೇವರು. ಒಪ್ಪಿಸಿದ ಪಟ್ಟದ ದೇವರನ್ನು ಇತರ ಮಠಾಧೀಶರು ಶಿಷ್ಯ ಸ್ವೀಕಾರ ಮಾಡಿಕೊಳ್ಳದೆ ಹಿಂತಿರುಗಿಸಲಾಗುವುದಿಲ್ಲ ಎಂದಿದ್ದರು. ಈ ಬಗ್ಗೆ ಶ್ರೀಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲದೆ ಪಟ್ಟದ ದೇವರನ್ನು ಹಿಂತಿರುಗಿಸದಿದ್ದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಿದ್ದಲ್ಲದೇ ಎಲ್ಲಾ ತಯಾರಿ ನಡೆಸಿದ್ದರು. 48ವರ್ಷಗಳಿಂದ ಪೂಜಿಸಿಕೊಂಡು ಬಂದಿದ್ದ ಪಟ್ಟದದೇವರು ಕೈತಪ್ಪಿದ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಏಕಾಂಗಿಯಾಗಿ ಬಿಕ್ಕಿಬಿಕ್ಕಿ ಅಳುತ್ತಿದ್ದರು ಎಂದು ಕೇಮಾರು ಶ್ರೀಗಳು ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಸ್ವಾಮಿಜಿ ಸಾವಿನ ಬಗ್ಗೆ ವೈದ್ಯರು ಹೇಳಿದ ಅಂಶ ಭಕ್ತರಲ್ಲಿ ಅನುಮಾನವನ್ನುಂಟು ಮಾಡಿದೆ. ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಕೂಡ ಈ ಬಗ್ಗೆ ಹಿರಿಯಡಕ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಇನ್ನಷ್ಟೇ ಹೊರಬೀಳಬೇಕಿದೆ.

Comments are closed.