ವಿಜಯಪುರ: ಬುದ್ಧಿ ಜೀವಿಗಳಿಂದಲೇ ನಮ್ಮ ದೇಶ ಹಾಳಾಗಿದೆ. ನಾನು ಗೃಹಮಂತ್ರಿಯಾದರೆ ಅವರ ಮೇಲೆ ಗುಂಡು ಹಾರಿಸಿ ಸಾಯಿಸಿ ಎಂದು ಆದೇಶಿಸುತ್ತಿದ್ದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗುರುವಾರ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಆಯೋಜಿಸಿದ್ದ 19ನೇ ಕಾರ್ಗಿಲ್ ವಿಜಯೋತ್ಸವ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್, ದೇಶದ್ರೋಹಿ ಸಂಘಟನೆಗಳಿಂದ ನಮ್ಮ ದೇಶ ಹಾಳಾಗುತ್ತಿದೆ. ರಾಜಕಾರಣಿಗಳು ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ಯೋಧರು 60 ಡಿಗ್ರಿ ಸೆಲ್ಸಿಯಸ್ ನಲ್ಲಿ ಕೆಲಸ ಮಾಡುತ್ತಾರೆ. ಆದರೆ, ನಾವು ಮೂರು ಕಿ.ಮೀ. ಹೋಗೋಕೆ ಪರದಾಡ್ತೀವಿ. ಇದು ನಮ್ಮ ದೇಶದ ದುರಂತ ಎಂದರು.
ತಮ್ಮ ಭಾಷಣದುದ್ದಕ್ಕೂ ಬುದ್ದಿ ಜೀವಿಗಳು ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯತ್ನಾಳ್, ಕಾಶ್ಮೀರದಲ್ಲಿರುವ ಜನರು ಕೂಡಾ ದೇಶದ ವಿರುದ್ಧ ಘೋಷಣೆ ಕೂಗುತ್ತಾರೆ. ಆದರೆ ಅಂತಹವರಿಗೆ ದೇಶದ ಕೆಲವರು ಬೆಂಬಲ ಕೊಡುತ್ತಾರೆ ಎಂದರು.
ನಮ್ಮ ದೇಶದ ಗಡಿ ಕಾಯುವ, ದೇಶವನ್ನು ರಕ್ಷಿಸುವ ಯೋಧರ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ಕೊಡುತ್ತಾರೆ. ಸೈನಿಕರು ಸಾಯೋಕೆ ಗಡಿಭಾಗಕ್ಕೆ ಹೋಗುತ್ತಾರೆ ಎಂದು ಅವಮಾನಿಸುತ್ತಾರೆ ಎಂದು ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments are closed.