ಮಂಗಳೂರು, ಜುಲೈ.28: ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಶೆಡ್ಡೆಬೈಲು ಎಂಬಲ್ಲಿನ ಮನೆಯ ಹಟ್ಟಿಯಿಂದ ಮನೆಯವರಿಗೆ ತಲವಾರು ತೋರಿಸಿ ಹೆದರಿಸಿ ಎರಡು ದನಗಳನ್ನು ಕಳವು ಮಾಡಿದ ಪ್ರಕರಣದ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಜ್ಪೆಯ ಶಾಂತಿಗುಡ್ಡೆಯ ಉಮರ್ ಫಾರೂಕ್ (32) ಹಾಗೂ ಬಂಟ್ವಾಳ ತಾಲೂಕಿನ ಅಮ್ಮೆಮಾರ್ ನಿವಾಸಿ ಇಮ್ರಾನ್ ಯಾನೆ ಕುಟ್ಟ ಇಮ್ರಾನ್ (27) ಬಂಧಿತ ಆರೋಪಿಗಳು.
ಜು.16ರಂದು ಮೂಡುಶೆಡ್ಡೆಬೈಲು ಪುರುಷೋತ್ತಮ ಎಂಬವರ ಮನೆಯ ಹಟ್ಟಿಯಲ್ಲಿ ಎರಡು ದನಗಳನ್ನು ಕಟ್ಟಿ ಹಾಕಲಾಗಿತ್ತು. ಈ ವೇಳೆ ಆರೋಪಿಗಳು ಮನೆಯವರಿಗೆ ತಲವಾರು ತೋರಿಸಿ ಹೆದರಿಸಿ ದನಗಳನ್ನು ಅಪಹರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಈ ತನಿಖಾ ತಂಡಗಳ ಪೈಕಿ ಮಂಗಳೂರು ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಶಾಂತಾರಾಮ್ ನೇತೃತ್ವದ ತಂಡ ಮಾಹಿತಿ ಕಲೆ ಆರೋಪಿಗಳನ್ನು ಬಂಧಿಸಿದೆ.ಬಂಧಿತರಿಂದ ಸ್ಕಾರ್ಪಿಯೋ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ಇಮ್ರಾನ್ ವಿರುದ್ಧ ಉಳ್ಳಾಲ, ಕೊಣಾಜೆ, ಬಜ್ಪೆ, ಮಂಗಳೂರು ಗ್ರಾಮಾಂತರ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ ಹಾಗೂ ಕೊಡಗು ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ, ಹಾಸನ ಜಿಲ್ಲೆಯ ಸಕಲೇಶಪುರ ಪೊಲೀಸ್ ಠಾಣೆಗಳಲ್ಲಿ ದನ ಕಳ್ಳತನ ಹಾಗೂ ಕೊಲೆ ಪ್ರಕರಣ ಸೇರಿದಂತೆ ಒಟ್ಟು 20 ಪ್ರಕರಣಗಳು ದಾಖಲಾಗಿವೆ.
ಇನ್ನೋರ್ವ ಆರೋಪಿ ಉಮರ್ ಫಾರೂಕ್ ವಿರುದ್ಧ ಬಜ್ಪೆ, ಬಂಟ್ವಾಳ ನಗರ, ಉಪ್ಪಿನಂಗಡಿ, ವೇಣೂರು, ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ ಠಾಣೆಗಳಲ್ಲಿ ದನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಅವರನ್ನು ಶೀಘ್ರದಲ್ಲಿ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
Comments are closed.