ಮಂಗಳೂರು, ಅಗಸ್ಟ್.15 : ದಕ್ಷಿಣ ಕನ್ನಡ, ಉಡುಪಿ, ಕೇರಳದ ಕಾಸರಗೋಡು ಜಿಲ್ಲೆ ಸೇರಿದಂತೆ ಕರಾವಳಿಯಾದ್ಯಂತ ಇಂದು ನಾಗರಪಂಚಮಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಭಕ್ತರಿಂದ ಕ್ಷೇತ್ರದರ್ಶನ, ವಿಶೇಷ ಪೂಜೆಗಳು ಪುಣ್ಯ ಕ್ಷೇತ್ರಗಳಲ್ಲಿ ನೆರವೇರಿದವು. ನಾಡಿನ ವಿವಿಧ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಗಳು, ದೇವಾಲಯಗಳ ನಾಗಸನ್ನಿಧಿ, ಕುಟುಂಬದ ಮೂಲ ನಾಗಬನಗಳಲ್ಲಿ ನಾಗತಂಬಿಲ, ಸೀಯಾಳಾಭಿಷೇಕ, ಪಂಚಾಮೃತ ಅಭಿಷೇಕ ಮುಂತಾದ ಸೇವೆಗಳು ಸಂಪನ್ನಗೊಂಡಿತು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಾರಾಧನೆ ಕ್ಷೇತ್ರಗಳಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ, ಆದಿ ಸುಬ್ರಹ್ಮಣ್ಯ, ಕುಡುಪು ಶ್ರೀ ಅನಂತ ಪದ್ಮನಾಭ, ಉಡುಪಿ ಆಸುಪಾಸಿನ ಮುಚ್ಲುಕೋಡು, ತಾಂಗೋಡು, ಮಾಂಗೋಡು, ಅರಿತೋಡು, ಸಗ್ರಿ ವಾಸುಕೀ ಸುಬ್ರಹ್ಮಣ್ಯ, ತೆಂಕಪೇಟೆ ವಾಸುಕೀ ಅನಂತಪದ್ಮನಾಭ, ಕುಂದಾಪುರ ತಾಲೂಕಿನ ಕಾಳಾವರ, ಗುಡ್ಡಮ್ಮಾಡಿ, ತೆಕ್ಕಟ್ಟೆ, ಉಳ್ತೂರು, ಶಿರೂರು ಪಡಿಯಾರಹಿತ್ಲು, ಕಾರ್ಕಳ ಸೂಡ, ಕಾಸರಗೋಡು ಜಿಲ್ಲೆಯ ವರ್ಕಾಡಿ, ಕಾಟುಕುಕ್ಕೆ, ಕುಮಾರಮಂಗಲ ದೇವಾಲಯ ಹಾಗೂ ಇನ್ನಿತರ ದೇವಾಲಯಗಳಲ್ಲಿ ಭಕ್ತರು ಅಧಿಕ ಸಂಖೆಯಲ್ಲಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಂಗಳೂರಿನ ಪ್ರಮುಖ ನಾಗರಾಧನ ಕ್ಷೇತ್ರವಾದ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನಿತರಾದರು. ದೇವಾಲಯದ ನಾಗಬನದಲ್ಲಿ ಹಾಲು, ಬೊಂಡ ಅಭಿಷೇಕ, ಸೀಯಾಳಾಭಿಷೇಕ, ನಾಗತಂಬಿಲ, ಪಂಚಾಮೃತ ಅಭಿಷೇಕಗಳು ನಡೆದವು. ಕುಡುಪು ದೇವಸ್ಥಾನದಲ್ಲಿ ಸುಮಾರು 15,000ಕ್ಕೂ ಮಿಕ್ಕಿ ನಾಗ ತಂಬಿಲ ಮತ್ತಿತರ ಸೇವೆಗಳು ನಡೆಯಿತು. ವಿವಿಧ ಕ್ಷೇತ್ರದ ನಾಗಸನ್ನಿಧಿಗಳಲ್ಲಿ ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ತಂಬಿಲ, ಸೀಯಾಳಾಭಿಷೇಕ ನೆರವೇರಿತು. ಬಹುತೇಕ ಕ್ಷೇತ್ರಗಳಲ್ಲಿ ಮತ್ತು ನಾಗಸನ್ನಿಧಿಗಳಲ್ಲಿ ಮಧ್ಯಾಹ್ನ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.
ಮಂಗಳೂರಿನ ಶ್ರೀ ಶರವು ಮಹಾಗಣಪತಿ, ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ, ಶ್ರೀ ಮಂಗಳಾದೇವಿ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ, ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ, ಬಳ್ಳಮಂಜ ಅನಂತೇಶ್ವರ ಸ್ವಾಮಿ, ಈಶ್ವರ ಮಂಗಲ ಶ್ರೀ ಪಂಚಲಿಂಗೇಶ್ವರ ದೇವಾಧಿಲಯ, ನಳಿಳು ಸುಬ್ರಹ್ಮಣ್ಯ, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನ, ಕೊಕ್ರಾಡಿ ಶಾಲಿಪು ಸುಬ್ರಹ್ಮಣ್ಯ ದೇವಸ್ಥಾನ, ಉಡುಪಿ ಶ್ರೀಕೃಷ್ಣ ಮಠ ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿರುವ ನಾಗನ ಸನ್ನಿಧಿಯಲ್ಲಿ ನಾಗರ ಪಂಚಮಿ ಆಚರಣೆ ನಡೆಯಿತು.
ಮೂಲಬನದಲ್ಲಿ ನಾಗಾರಾಧನೆ:
ಇನ್ನು ಕೆಲವರು ತಮ್ಮ ಕುಟುಂಬದ, ಊರಿನ ನಾಗಬನಗಳಲ್ಲಿ ನಾಗನ ಮೂರ್ತಿಗಳಿಗೆ ತನು ಎರೆದು ನಾಗತಂಬಿಲ ಸೇವೆ ಸಲ್ಲಿಸಿ ನಾಗರ ಪಂಚಮಿ ಆಚರಿಸಿದರು.ನಾಡಿನ ಉದ್ದಗಲಕ್ಕೆ ಹರಡಿರುವ ವಿವಿಧ ಕುಟುಂಬಗಳ ಮೂಲಬನಗಳಲ್ಲಿ ನಾಗದೇವರಿಗೆ ತಂಬಿಲ, ಕ್ಷೀರಾಭಿಷೇಕ, ಸೀಯಾಳಾಭಿಷೇಕ ಮುಂತಾದ ಸೇವೆಗಳು ನಡೆದವು.
ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಸೇವೆಗಳ ಮೂಲಕ ನಾಗದೇವತೆಗೆ ಪ್ರಾರ್ಥನೆ ಸಲ್ಲಿಸಲಾಯಿತು.ಇತರ ದೇಗುಲಗಳಲ್ಲಿಯೂ ನಾಗರ ಪಂಚಮಿ ಪ್ರಯುಕ್ತ ನಾಗದೇವರಿಗೆ ತನು-ತಂಬಿಲ ಸೇವೆ ನಡೆಯಿತು. ನಾಗರ ಪಂಚಮಿ ಪ್ರಯುಕ್ತ ಮಾರುಕಟ್ಟೆಗಳಲ್ಲಿ ಹೂವಿನ ವ್ಯಾಪಾರ ಹಾಗೂ ಕೇದಗೆ, ಗೆಂದಾಲಿ ಬೊಂಡಗಳ ವ್ಯಾಪಾರ ಜೋರಾಗಿತ್ತು. ನಾಗನಿಗೆ ಪ್ರಿಯವಾದ ಅಡಿಕೆಯ ಹಿಂಗಾರಕ್ಕೆ ಭಾರೀ ಬೇಡಿಕೆಯಿತ್ತು.
ಧಾರಾಕಾರ ಮಳೆ: ಭಕ್ತಾಧಿಗಳಿಗೆ ಸ್ವಲ್ಪ ಅಡಚಣೆ
ಬಹುತೇಕರು ಮುಂಜಾನೆಯಿಂದಲೇ ಮೂಲಬನಗಳಿಗೆ ಹೋಗಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಕೂಡ ಅಧಿಕವಾಗಿತ್ತು. ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆ ಇಂದು ಕೂಡ ಮುಂದುವರಿದಿದ್ದು, ದೂರದೂರುಗಳಿಗೆ ತೆರಳಿ ನಾಗರಪಂಚಮಿಯಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳಿಗೆ ಸ್ವಲ್ಪ ಅಡಚಣೆ ಉಂಟಾಯಿತು.
Comments are closed.