ಕರಾವಳಿ

ಸಕಲ ಮಾನವ ಜನಾಂಗಕ್ಕೆ ಒಳಿತಾಗಲಿ ಎಂಬುದು ಧರ್ಮ ಸಂಸದ್‌ನ ಚಿಂತನೆಯಾಗಲಿ : ಡಾ. ಡಿ ವೀರೇಂದ್ರ ಹೆಗ್ಗಡೆ

Pinterest LinkedIn Tumblr

ಮಂಗಳೂರು / ಬೆಳ್ತಂಗಡಿ, ಸೆಪ್ಟಂಬರ್. 04: ದೇವರಲ್ಲಿ ಅಚಲವಾದ ನಂಬಿಕೆಯನ್ನು ಬೆಳೆಸಿಕೊಂಡು ಮೂಢ ನಂಬಿಕೆಗಳಿಂದ ದೂರವಾಗಿ ಮಾನವೀಯತೆಯನ್ನು ಮೈಗೂಡಿಸಿಕೊಂಡು ಧರ್ಮದ ಆಧಾರದಲ್ಲಿ ಎಲ್ಲರೂ ಬದುಕನ್ನು ನಡೆಸಿದಾಗ ದೇಶಕ್ಕೆ ಮಾನವ ಕುಲಕ್ಕೆ ಒಳಿತಾಗಲು ಸಾಧ್ಯವಿದೆ. ಸಕಲ ಮಾನವ ಜನಾಂಗಕ್ಕೆ ಒಳಿತಾಗಲಿ ಎಂಬುದು ಧರ್ಮ ಸಂಸದ್‌ನ ಚಿಂತನೆಯಾಗಲಿ, ಧರ್ಮದ ತಳಹದಿಯಲ್ಲಿ ಪ್ರತಿಯೊಬ್ಬರೂ ಜೀವನ ನಡೆಸುವಂತಾದಾಗ ಅದು ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಮ್ ಕನ್ಯಾಡಿಯ ಆತ್ಮಾನಂದ ಸರಸ್ವತಿ ವೇದಿಕೆಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಧರ್ಮಸಂಸದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಜುನಾ ಅಖಾಡದ ಮಹಂತ ದೇವಾನಂದ ಸರಸ್ವತಿ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿಅದ ಅವರು, ಇಂದು ನಮ್ಮ ಯುವ ಸಮುದಾಯ ಧಾರ್ಮಿಕತೆಯಿಂದ ದೂರ ಸರಿಯುತ್ತಿದ್ದಾರೆ ಇದಕ್ಕೆ ಕಾರಣ ನಮ್ಮ ಶಿಕ್ಷಣ ಪದ್ದತಿಯೇ ಆಗಿದೆ. ನಮ್ಮ ಶಿಕ್ಷಣ ಪದ್ದತಿಯಲ್ಲಿ ಅಮೂಲ್ಯಾಗ್ರ ಬದಲಾವಣೆ ಅಗತ್ಯವಿದೆ ಎಂದು ಹೇಳಿದರು.

ಧರ್ಮಸಂಸದ್‌ನ ರೂವಾರಿ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ನಮ್ಮ ಶಿಕ್ಷಣ ನೀತಿಯಿಂದಾಗಿ ದೇಶದಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಬ್ರಿಟೀಷರು ಬಿಟ್ಟು ಹೋಗಿರುವ ಶಿಕ್ಷಣಪದ್ದತಿಯನ್ನು ಬದಲಿಸಬೇಕಾಗಿದೆ, ನಮ್ಮ ಮಕ್ಕಳು ಯಾರದ್ದೋ ಇತಿಹಾಸವನ್ನು ಕಲಿಯುವ ಅಗತ್ಯವಿಲ್ಲ. ಅವರು ರಾಮಾಯಣ, ಮಹಾಭಾರತ, ವೇದ, ಉಪನಿಷತ್, ಭಗವದ್ಗೀತೆಗಳನ್ನು ಕಲಿಯುವ ಅಗತ್ಯವಿದೆ, ದೇಶದ ಸಂತರನ್ನು ಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರಗಳು ಒಂದು ಶಿಕ್ಷಣ ನೀತಿಯನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಅವಕಾಶ ವಾದಿಗಳು ಸಮಾಜವನ್ನು ದಾರಿತಪ್ಪಿಸುತ್ತಿದ್ದಾರೆ, ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಭ್ರಷ್ಟಾಚಾರದ ಮೂಲ ಬೇರನ್ನು ಕಿತ್ತೆಸೆಯುವ ಅಗತ್ಯವಿದೆ. ಅದಕ್ಕೆ ಪ್ರೇರಣೆ ನೀಡುತ್ತಿರುವ ಶಕ್ತಿಗಳನ್ನು ಗುರುತಿಸಿ ಅದನ್ನು ಮಟ್ಟ ಹಾಕುವ ಕಾರ್ಯ ನಡೆಯಬೇಕಾಗಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು. ಶಾಸಕ ಹರೀಶ್ ಪೂಂಜಾ ಮಾತನಾಡಿದರು.

ಸಂತರ ಅದ್ದೂರಿ ಮೆರವಣಿಗೆಯೊಂದಿಗೆ ರಾಷ್ಟ್ರೀಯ ಧರ್ಮಸಂಸದ್‌ಗೆ ಚಾಲನೆ :

ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಆಯೋಜನೆ ಗೊಂಡಿರುವ ಧರ್ಮ ಸಂಸದ್‌ಗೆ ರವಿವಾರ ಸಂತರ ಅದ್ದೂರಿ ಮೆರವಣಿಗೆಯೊಂದಿಗೆ ಚಾಲನೆ ದೊರಕಿದೆ.

ರವಿವಾರ ಸಂಜೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ಕ್ಷೇತ್ರದಿಂದ ಸಂತರ ಶೋಭಾಯಾತ್ರೆ ನಡೆದಿದ್ದು, ವಿವಿಧ ಗೊಂಬೆ ಬಳಗ, ಚೆಂಡೆ, ನಾಸಿಕ್‌ ಬ್ಯಾಂಡ್‌, ಟ್ಯಾಬ್ಲೋಗಳು ಮೆರವಣಿಗೆಗೆ ಮೆರುಗು ನೀಡಿದವು. ಜತೆಗೆ ಕನ್ಯಾಡಿ ಕ್ಷೇತ್ರದಲ್ಲಿ ಪುತ್ತೂರು ಜಗದೀಶ್‌ ಆಚಾರ್ಯ ಬಳಗದಿಂದ ಸಂಗೀತ ಕಾರ್ಯಕ್ರಮ, ರಾತ್ರಿ ಧರ್ಮ ಸಂಸದ್‌ನ ನಿರ್ಣಯಗಳ ಕುರಿತು ಸಂತರ ಬೈಠಕ್‌ ನಡೆಯಿತು.

Comments are closed.