ಆನೆಗುಡ್ಡೆ ಗಣಪ:
ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿರುವ ಪುರಾಣ ಪ್ರಸಿದ್ಧ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ಕ್ಷೇತ್ರದಲ್ಲಿ ಹಿಂದೆ ಗೌತಮರು ತಪಸ್ಸು ಮಾಡುತ್ತಿದ್ದರು. ಕುಂಭಾಸುರ ಎನ್ನುವ ಧೈತ್ಯನ ಉಪಟಳವನ್ನು ನಿವಾರಿಸಬೇಕೆಂದು ಅವರು ಇಲ್ಲಿಗೆ ವನವಾಸ ಕಾಲದಲ್ಲಿ ಬಂದ ಭೀಮ ಸೇನನ ಹತ್ತಿರ ಹೇಳಿದ್ದು ಭೀಮ ಸೇನನು ಅಶರೀರವಾಣಿಯಂತೆ ಶಕ್ತಿಯಿಂದ ಅಸುರನ್ನು ಸಂಹಾರ ಮಾಡಿದ್ದರಿಂದ ಕುಂಭ+ಅಸಿ= ಕುಂಭಾಸಿ ಎಂಬ ಹೆಸರು ಬಂದಿತೆಂದು ಪುರಾಣ ಕತೆಯಿಂದ ತಿಳಿದು ಬರುತ್ತದೆ.
ಕುಂಭಾಶಿ ಕ್ಷೇತ್ರವನ್ನು, ಕುಂಭಾಶಿ ಮಠದ ಶ್ರೀ ವಾದಿರಾಜ ಯತಿಗಳು ಕ್ಷೇತ್ರ ರಾಜನೆಂದು ವರ್ಣಿಸಿರುವರು. ಈ ಕ್ಷೇತ್ರದ ಮೇಲ್ಗಡೆಯಲ್ಲಿ ಇರುವ ಗುಹೆಗಳೇ ಕ್ಷೇತ್ರ ರಾಜನ ಮುಖವಾಗಿದೆ. ಸೂರ್ಯ ಮತ್ತು ಚಂದ್ರ ಪುಷ್ಕರಣೆ ತೀರ್ಥ ಕ್ಷೇತ್ರ ರಾಜನ ಕಣ್ಣುಗಳಾಗಿವೆ ಎಂದು ಈ ಕ್ಷೇತ್ರವನ್ನು ಪುರುಷಾ ಕೃತಿಯಲ್ಲಿ ವರ್ಣಿಸಿರುವರು.
ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನ ಈ ದೇವಸ್ಥಾನದಲ್ಲಿ ನಿತ್ಯವೂ ಸಾವಿರಾರು ಜನರಿಗೆ ಅನ್ನದಾನ ನಡೆಯುತ್ತಿರುತ್ತದೆ. ಇದಕ್ಕಾಗಿಯೇ ಒಂದು ಭವ್ಯವಾದ ಭೋಜನ ಶಾಲೆ ಇದೆ. ಕೋಟ್ಯಾಂತರ ರೂಪಾಯಿಗಳ ವೆಚ್ಚದಿಂದ ಈ ಭವನವು ನಿರ್ಮಾಣಗೊಂಡಿದೆ. ಅಲ್ಲದೆ ಬರುವ ಭಕ್ತಾದಿಗಳಿಗಾಗಿ ವಸತಿ ಗೃಹಗಳು ಕಲ್ಯಾಣ ಮಂಟಪ ಇವುಗಳಿಂದ ಆನೆಗುಡ್ಡೆಯು ಸುಪ್ರಸಿಧ್ಧವಾಗಿದೆ
ಚೌತಿ ಹಬ್ಬದ ದಿನ, ಸಂಕಷ್ಟಹರ ಚತುರ್ಥಿಯ ದಿನ, ಸಂಕ್ರಾತಿಯಂತಹ ಪರ್ವ ದಿನಗಳಲ್ಲಿ ಆನೆಗುಡ್ಡೆಯಲ್ಲಿ ವಿಶೇಷವಾಗಿ ಭಕ್ತರ ಸಮೂಹ ಸೇರುತ್ತದೆ. ಆನೆಗುಡ್ಡೆಗೆ ತಮ್ಮ ತಮ್ಮ ವಾಹನಗಳನ್ನು ತಂದು ಜನರು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಗಣಪತಿ ದೇವರ ಕಾರಣೀಕದ ಕುರಿತು ಅನೇಕ ಆಖ್ಯಾಯಿಕೆಗಳ ಇರುವುದರಿಂದ ಈ ಗಣಪತಿಯು ಮಾತನಾಡುವ ಗಣಪತಿಯೊಂದು ಪ್ರಸಿದ್ಧವಾಗಿದೆ.
ಶುದ್ಧ ಚತುರ್ಥಿಯಂದು ಆನೆಗುಡ್ಡೆ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯನ್ನು ವಿಶೇಷವಾಗಿ ಆಯೋಜಿಸಲಾಗುತ್ತದೆ. ಅಷ್ಟೋತ್ತರ ಸಹಸ್ರ ನಾರೀಕೇರ ಗಣಯಾಗ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಿದ್ಧಿವಿನಾಯಕನ ಸನ್ನಿಧಿಯಲ್ಲಿ ಜರುಗುತ್ತದೆ
ಹಟ್ಟಿಯಂಗಡಿ ಗಣೇಶ
ಕಡಲನ್ನು ಸೇರುವ ತವಕದಲ್ಲಿ ಹರಿದೋಡುತ್ತಿರುವ ವಾರಾಹಿ ನದಿಯ ಉತ್ತರ ದಂಡೆಯ ಮೇಲೆ ಇರುವ ಪುಟ್ಟ ಗ್ರಾಮ ಹಟ್ಟಿಯಂಗಡಿ. ಸುಮಾರು 2000ಕ್ಕೂ ಅಧಿಕ ವರ್ಷಗಳ ಇತಿಹಾಸ ಇದಕ್ಕಿದೆ. ಪ್ರಾಚೀನ ರಾಜಧಾನಿಯಾಗಿ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಹಲವು ಧರ್ಮಗಳ ನೆಲೆಯಾಗಿ ಕಲೆ, ಸಾಹಿತ್ಯ, ಸಂಸ್ಕೃತಿಯ ಕೇಂದ್ರವಾಗಿ ಮೆರೆದಿದ್ದ ಸ್ಥಳವಿದು. ಈಗ ಇತಿಹಾಸವನ್ನು ತನ್ನ ಗರ್ಭದಲ್ಲಿಟ್ಟುಕೊಂಡು ಪೇಟೆಗೆ ಸಮೀಪವಿದ್ದರೂ ಆಲ್ಲಿಯ ಸದ್ದುಗದ್ದಲಗಳಿಂದ ದೂರವಾಗಿ ಪ್ರಶಾಂತ ವಾತಾವರಣದಲ್ಲಿರುವ ಒಂದು ಸ್ಥಳ.
ಪ್ರಕೃತಿಯ ಸುಂದರ ಪ್ರಶಾಂತ ಮಡಿಲಿನಲ್ಲಿರುವ ಈ ಊರಿನ ಪ್ರಮುಖ ಆಕರ್ಷಣೆ ಶ್ರೀ ಸಿದ್ದಿವಿನಾಯಕ ದೇವಾಲಯ. ಈ ದೇವಾಲಯ ಇಲ್ಲದೆ ಇದ್ದಿದ್ದರೆ ಪ್ರಾಯಶಃ ಹಟ್ಟಿಯಂಗಡಿ ಮರೆತು ಹೋದ ಊರಿನ ಪಟ್ಟಿಗೆ ಸೇರಿ ಶತಮಾನಗಳೇ ಉರುಳುತಿದ್ದವು. ಸಾವಿರ ವರ್ಷಗಳಿಕ್ಕಿಂತಲೂ ಹಿಂದೆ ಹಟ್ಟಿಯಂಗಡಿಗೆ ಪಟ್ಟಿಯ ನಗರ ಎಂಬ ಹೆಸರಿತ್ತು. ಇದಕ್ಕೆ ಶಾಸನಾಧಾರಗಳಿವೆ. ತುಳುನಾಡನ್ನು ಆಳಿದ ಪ್ರಪ್ರಥಮ ರಾಜವಂಶದ ಅಳುಪ ರಾಜರಲ್ಲಿ ಕೆಲವರು ಪಟ್ಟಿ ಒಡೆಯ, ಪಾಂಡ್ಯ ಪಟ್ಟಿ ಒಡೆಯ. ಪಟ್ಟಿ ಒಡೆಯ ಕುಲಶೇಖರ ಎಂಬ ಹೆಸರನ್ನು ಹೊಂದಿದ್ದು ಅದgಲ್ಲಿ ಪಟ್ಟಿ ಪ್ರಮುಖವಾಗಿ ಕಾಣಿಸಿಕೊಂಡಿತು. ಕ್ರಿ.ಶ. 8 ನೇ ಶತಮಾನಕ್ಕೆ ಸೇರುವ ಹಟ್ಟಿಯಂಗಡಿಯ ಅತ್ಯಂತ ಪ್ರಾಚೀನ ಶಿಲಾಯುಗದಲ್ಲಿಯು ಈ ಊರನ್ನು ಪಟ್ಟಿ ಎಂದು ಹೆಸರಿಸಲಾಗಿದೆ. ಪ್ರಥಮ ಬಾರಿಗೆ ಈ ಊರನ್ನು ಹಟ್ಟಿಯಂಗಡಿ ಎಂದು ಹೆಸರಿಸುವ ಕ್ರಿ.ಶ. 1377ರ ಶಾಸನವೊಂದು ಇಲ್ಲಿಯ ಶ್ರೀ ಚಂದ್ರನಾಥ ಬಸದಿಯಲ್ಲಿದೆ. ಪಟ್ಟಿ ಆಥವಾ ಹಟ್ಟಿ ಎಂದರೆ ಒಂದು ಕಿರು ಗ್ರಾಮ.
ಗುಡ್ಡಟ್ಟು: ಗುಹೆಯೊಳಗಿನ ಜಲಾದಿವಾಸ ಗಣಪ
ಕುಂದಾಪುರದಿಂದ ಶಿವಮೊಗ್ಗ ಮಾರ್ಗದಲ್ಲಿನ ಯಡಾಡಿ-ಮತ್ಯಾಡಿ ಗ್ರಾಮದಲ್ಲಿ ತೀರಾ ಅಪರೂಪದ ಒಂದು ದೇವಾಲಯ ಕಾಣಸಿಗುತ್ತದೆ. ಕಾಡು ಮೇಡು ಹಾಗೂ ಹಸಿರು ಬಯಲಿನ ಮದ್ಯ ಬೃಹತ್ ಬಂಡೆಯ ನಡುವೆಯೇ ಗುಡ್ಡಟ್ಟು ವಿನಾಯಕನ ಆವಾಸಸ್ಥಾನ. ಗುಹೆಯ ಬಂಡೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ ದಕ್ಷಿಣಕ್ಕೆ ಮುಖಮಾಡಿ ಸೊಂಡಿಲನ್ನು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಗಣಪನ ವಿಗ್ರಹವೇ ಇಲ್ಲಿಯ ಆರಾಧ್ಯ ದೇವ. ಬಹಳಷ್ಟು ಆಕಾರ ಹೊಂದಿರುವ ಶ್ರೀ ದೇವರ ಮೂಲ ಬಿಂಬವು ವರ್ಷದ ಎಲ್ಲಾ
ಸಂದರ್ಭದಲ್ಲಿಯೂ ನೀರಿನಲ್ಲಿಯೇ ಮುಳುಗಿರುವುದು ಇಲ್ಲಿನ ವಿಶೇಷ, ನಿಸರ್ಗ ಪ್ರಿಯರಿಗಂತೂ ಈ ಕ್ಷೇತ್ರ ರಮಣೀಯ. ರಾಜ್ಯಾದ್ಯಾಂತ ಪ್ರವಾಸಿಗರು ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ.
ಕ್ಷೇತ್ರ ಪುರಾಣ: ಇಂದೊಂದು ಪುರಾಣ ಪ್ರಸಿದ್ದವಾದ ಕ್ಷೇತ್ರ ಎಂಬುವುದು ನಿಸ್ಸಂದೇಹ. ತ್ರಿಪುರಾಸುರನ ಸಂಹಾರ ಕಾಲದಲ್ಲಿ ಈಶ್ವರನು ಯುದ್ದಕ್ಕೆ ಹೋಗುವಾಗ ಪ್ರಮಾದವಶಾತ್ ಗಣಪತಿಯನ್ನು ಸ್ಮರಿಸದೇ ತೆರಳುತ್ತಾನೆ, ಆದರೆ ಜಯಲಭಿಸದೇ ಪರದಾಡುತ್ತಿರುವಾಗ ತನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತು ಪರಶಿವನು ಕೋಪಗೊಂಡು ಗಣಪತಿಯ ಮೇಲೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ ಆದರೆ ಯಾವ ಅಸ್ತ್ರವು ಗಣಪತಿಯನ್ನು ಏನೂ ಮಾಡಲು ಸಾದ್ಯವಾಗಲಿಲ್ಲ.ಅದೇ ರೀತಿಯಲ್ಲಿ ಶಿವನು ಪ್ರಯೋಗಿಸಿದ ಅಸ್ತ್ರ ಹುಸಿಯಾಗಲೂ ಸಾದ್ಯವಾಗಿಲ್ಲ, ಈ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ಆ ಅಸ್ತ್ರವು ಗಣಪತಿಯನ್ನು ಹೊತ್ತೋಯ್ದು ಮಧು ಸಾಗರದಲ್ಲಿ ಕೆಡೆಯುತ್ತದೆ, ಮಧು ಅರ್ಥಾತ್ ಜೇನು, ತುಪ್ಪ ಗಣಪತಿಗೆ ಅತಿ ಪ್ರಿಯವಾದ ವಸ್ತುವಾದ ಕಾರಣ ಯಥೇಚ್ಚ ಮಧುಪಾನ ಮಾಡಿದ ಗಣಪತಿಯ ವೃತನಾಗಿ ತನ್ನನ್ನು ಇಲ್ಲಿಗೆ ತಂದು ಹಾಕಿದವರ ಕಾರ್ಯ ಜಯವಾಗಲೆಂದು ವರಪ್ರಸಾದ ಮಾಡುತ್ತಾನೆ. ಇದರ ಪರಿಣಾಮ ತ್ರಿಪುರಾಸುರನ ಸಂಹಾರವಾಗಿ ಶಿವನಿಗೆ ಜಯ ಲಭಿಸುತ್ತದೆ. ಆದರೆ ಅತಿಯಾದ ಸಿಹಿ/ಮಧು ಸೇವನೆಯಿಂದ ದೇಹದಲ್ಲಿ ಉಷ್ಣ ಹೆಚ್ಚಾಗಿ ಉರಿ ಪ್ರಾರಂಭಿಸುವುದು ಸ್ವಾಭಾವಿಕವಾದ ಕಾರಣದಿಂದಾಗಿ ಗಣಪತಿ ಮಧುಸಾಗರದಲ್ಲಿ ಉಷ್ಣಾಧಿಕದಿಂದ ಒದ್ದಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಶಿವನು ಗಣಪತಿಯ ಉರಿ ಶಮನಕ್ಕಾಗಿ ನರಸಿಂಹ ತೀರ್ಥದಲ್ಲಿ ಜಲಾಧಿವಾಸವಾಗಿರು ಎಂದು ಈ ಸ್ಥಾನವನ್ನು ಗಣಪತಿಗೆ ಅನುಗ್ರಹಿಸುತ್ತಾನೆ, ಅಂತೆಯೇ ಇಲ್ಲಿ ಹರಿಯುವ ವಾರಾಹಿ ಉಪ ನದಿ ನರಸಿಂಹ ತೀರ್ಥ ಎಂಬ ನದಿಯ ಪಕ್ಕದಲ್ಲಿ ಇರುವ ಬಂಡೆಯ ಮಡುವಿನಲ್ಲಿ ಜಲಾದಿವಾಸವಾಗಿ ನೆಲೆಸಿ ಗಣಪತಿಯು ಭಕ್ತರನ್ನು ಉದ್ದರಿಸುತ್ತಿದ್ದಾನೆ ಎನ್ನುವುದು ನಂಬಿಕೆ.
ಆಯರ್ ಕೊಡ ಸೇವೆ: ಇಲ್ಲಿಯ ವಿಶೇಷ ಸೇವೆ ಇದಾಗಿದ್ದು, ಗುಹೆಯೊಳಗಿನ ನೀರನ್ನು ತಾಮ್ರದ ಕೈಬಟ್ಟಲು ಉಪಯೋಗಿಸಿ ಪೂರ್ತಿ ಖಾಲಿ ಮಾಡಲಾಗುತ್ತದೆ ನಂತರ ನಂತರ ದೇವರಿಗೆ ತೈಲಾಭ್ಯಂಜನ ಮಾಡಿಸಿ ರುದ್ರಾಭಿಷೇಕ ಮಾಡಲಾಗುತ್ತದೆ. ಅಭಿಷೇಕದ ನೀರನ್ನು ಹೊರತೆಗೆದು ಭಕ್ತಾಭಿಮಾನಿಗಳಿಗೆ ಶ್ರೀ ದೇವರ ಮೂಲ ಬಿಂಬ ಪ್ರಸಾದ ನೀಡಲಾಗುವುದು. ಪುನಃ ಮೂಲ ಬಿಂಬಕ್ಕೆ ಆಲಂಕಾರ ಪೂಜೆ ನೈವೆದ್ಯ ನೆರವೇರಿಸಿ ಪವಮಾನ ಮಂತ್ರ ಪಠಿಸುತ್ತಾ ಗುಹೆಯೊಳಗೆ ತುಂಬಿ ಹರಿವಷ್ಟು ಶುದ್ದ ಜಲ ಅಭಿಷೇಕ ಮಾಡಿ ಪೂಜೆ ಮಾಡಲಾಗುತ್ತದೆ.
ಹೀಗೆ ಹಳೆ ನೀರನ್ನು ತೆಗೆದು ಹೊಸ ನೀರಿನ ಅಭಿಷೇಕ, ೨ ಭಾರಿ ರುದ್ರಾಭಿಷೇಕ, ಒಮ್ಮೆ ಪವಮಾನ ಅಭಿಷೇಕ, ನಂತರ 1000 ಸಾವಿರ ಕೊಡ ಜಲ ಅಭಿಷೇಕ ಮಾಡುವ ಈ ಸೇವೆಗೆ ಆಯರ್ ಕೊಡ ಎಂದು ಹೆಸರು.
ಸಂತಾನ ಪ್ರಾಪ್ತಿ, ಶೀಘ್ರ ವಿವಾಹ, ಹಾಗೂ ಉತ್ತಮ ಆರೋಗ್ಯ ಸಂಪತ್ತಿಗಾಗಿ ಹಿಂದೆ ದಿನಕ್ಕೆ ಒಮ್ಮೆ ಮಾತ್ರ ಸೇವೆ ನಡೆಯುತ್ತಿತ್ತು ಕ್ರಮೇಣ ಬೇಡಿಕೆ ಜಾಸ್ತಿಯಾಗಿ 2007 ರಲ್ಲಿ ( ಬೆಳಿಗ್ಗೆ 7 ರಿಂದ 10.10 ರಿಂದ ಅಪರಾಹ್ನ 1 ಗಂಟೆ ತನಕ) ದಿನವೊಂದರ ಎರಡು ಸೇವೆಗಾಗಿ ಬ್ರಾಹ್ಮಣ ಕುಟುಂಬಗಳು ತೊಡಗಿಸಿಕೊಂಡಿದ್ದಾರೆ, ಇದೀಗ ಆಯರ್ ಕೊಡ ಸೇವೆ ಒಂದು ವರ್ಷದವರೆಗೂ ಬುಕ್ಕಿಂಗ್ ಆಗಿರುತ್ತದೆ.
ಮಾರ್ಗ ಸೂಚಿ: ಉಡುಪಿಯಿಂದ- ಬ್ರಹ್ಮಾವರ-ಬಾರ್ಕೂರು- ಶಿರಿಯಾರ- ಗುಡ್ಡಟ್ಟು-28 ಕಿಲೋ ಮೀಟರ್, ಕುಂದಾಪುರದಿಂದ-ಶಿವಮೊಗ್ಗ ಮಾರ್ಗವಾಗಿ- ಕೋಟೇಶ್ವರ-ಗುಡ್ಡಟ್ಟು-18 ಕಿಲೋ ಮೀಟರ್, ಶಿವಮೊಗ್ಗ_ ಹೊಸಂಗಡಿ-ಸಿದ್ದಾಪುರ- ಶಂಕರನಾರಾಯಣ-ಗುಡ್ಡಟ್ಟು-147 ಕಿಲೋ ಮೀಟರ್.
ಇತಿಹಾಸ: ಗರ್ಭ ಗುಡಿಯು ಸಾದಾರಣ 800 ವರ್ಷಗಳ ಹಳೆಯದು ಎಂದು ಇಲ್ಲಿಗೆ ಭೇಟಿ ನೀಡಿದ ಪುರಾತತ್ವ ಸಂಶೋಧಕರಾದ ಗುರುರಾಜ ಭಟ್ಟ್ ಇವರ ಅಭಿಪ್ರಾಯವಾಗಿದೆ. 1997 ರಲ್ಲಿ ನೂತನ ಗರ್ಭಗುಡಿ, ತೀರ್ಥ ಮಂಟಪ, ಹೆಬ್ಬಾಗಿಲು ರಚನೆಯಾಗಿದೆ.
Comments are closed.