ಕುಂದಾಪುರ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಶನಿವಾರ ಸಂಜೆ ಹಳ್ಳಿಹೊಳೆ ಕೊರಗ ಕಾಲನಿ ಹಾಗೂ ಬೈಂದೂರು ಸರ್ಕಾರಿ ಆಶ್ರಮ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯ ಸರ್ಕಾರದ ಆದೇಶದ ಮೇರೆಗೆ ಆಶ್ರಮ ಶಾಲೆಗಳಲ್ಲಿ ವಾಸ್ತವ್ಯಕ್ಕಾಗಿ ಆಗಮಿಸಿದ ಅವರು ಹಳ್ಳಿಹೊಳೆ ಸಮೀಪದ ಬಾಚಗುಳಿ ಕೊರಗ ಕಾಲನಿಗೆ ಭೇಟಿ ನೀಡಿ, ವಸತಿ, ಕುಡಿಯುವ ನೀರಿನ ಸಮಸ್ಯೆ ಮುಂತಾದವುಗಳ ಬಗ್ಗೆ ಪರಿಶೀಲನೆ ನಡೆಸಿದರು. ಮನೆ ಕಟ್ಟಿಕೊಳ್ಳಲು ಹಣದ ಕೊರತೆ ಇರುವುದರಿಂದ ಮುಂಗಡವಾಗಿ ಹಣ ಕೊಡಲಾಗದ ಸ್ಥಿತಿ ಇರುವುದರಿಂದ ಬೇರೊಂದು ಏಜೆನ್ಸಿಯಿಂದ ಮನೆ ನಿರ್ಮಿಸಿಕೊಡುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು.
ಬಳಿಕ ರಾತ್ರಿ ವಾಸ್ತವ್ಯಕ್ಕಾಗಿ ಬೈಂದೂರು ಸರ್ಕಾರಿ ಪ.ವರ್ಗ ಆಶ್ರಮ ಶಾಲೆಗೆ ಭೇಟಿ ನೀಡಿದ ಅವರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ ಬಳಿಕ ಅಡುಗೆ ಕೋಣೆ, ದಾಸ್ತಾನು ಕೊಠಡಿ, ಊಟದ ಕೊಠಡಿ, ಶೌಚಾಲಯಗಳನ್ನು ಪರಿಶೀಲನೆ ನಡೆಸಿದರು.
ಮಕ್ಕಳೊಂದಿಗೆ ಊಟಕ್ಕೆ ಕೂತ ಡಿಸಿ!
ಆಶ್ರಮ ಶಾಲೆ ಪರೀಶೀಲನೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಕ್ಕಳೊಂದಿಗೆ ನೆಲದಲ್ಲೇ ಊಟಕ್ಕೆ ಕೂತು ಅನ್ನ, ಸಾರು, ಪಲ್ಯ, ಮೊಸರು ಸವಿದರು.
ಕಣ್ಣು ನೋವು: ಮರಳಿ ಉಡುಪಿಗೆ
ಶನಿವಾರ ರಾತ್ರಿ ವಾಸ್ತವ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿಯವರಿಗೆ ವಿಪರೀತವಾಗಿ ಕಣ್ಣುನೋವು ಕಾಣಿಸಿಕೊಂಡಿದ್ದರಿಂದ ವಾಸ್ತವ್ಯ ಮಾಡದೆ ಉಡುಪಿಗೆ ಮರಳಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಶಾಪ, ಬೈಂದೂರು ತಹಶೀಲ್ದಾರ್ ಕಿರಣ್ ಗೌರಯ್ಯ, ತಾ.ಪಂ ಕಾರ್ಯ ನಿಋವಹಣಾಧಿಕಾರಿ ಕಿರಣ್ ಫಡ್ನೇಕರ್, ಐಟಿಡಿಪಿ ಅಧಿಕಾರಿ ವಿಶ್ವನಾಥ್, ಕುಂದಾಪುರ ಸಮಾಜ ಕಲ್ಯಾಣ ಇಲಾಖೆಯ ರಾಘವೇಂದ್ರ ಇದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.