ಮೂಡುಬಿದಿರೆ, ಸೆಪ್ಟಂಬರ್.24: ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ಮುಂಜಾನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಟಾಲ್‌ಕಟ್ಟೆ ಎಂಬಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಗಂಟಾಲ್‌ಕಟ್ಟೆ ನಿವಾಸಿ ಇಮ್ತಿಯಾಝ್(32) ಎಂದು ಗುರುತಿಸಲಾಗಿದೆ. ಈತ 2015ರಲ್ಲಿ ಮೂಡುಬಿದಿರೆಯಲ್ಲಿ ನಡೆದ ಸಂಘ ಪರಿವಾರದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿ ಎಂದು ಹೇಳಲಾಗಿದೆ.
ಇಮ್ತಿಯಾಝ್ ಗಂಟಾಲ್‌ಕಟ್ಟೆ ಮಸೀದಿಯ ಕಟ್ಟಡವೊಂದರಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದು, ಎಂದಿನಂತೆ ಇಂದು ಬೆಳಗ್ಗೆ ಅವರು ಹೊಟೇಲ್‌ನಲ್ಲಿದ್ದ ವೇಳೆ 8 ಮಂದಿಯ ತಂಡ ಆಗಮಿಸಿ ಹೋಟೆಲ್‌ನಲ್ಲಿ ಕುಳಿತು ಇಮ್ತಿಯಾಝ್ ಅವರಲ್ಲಿ ಚಹಾ ಕೇಳಿದೆ. ಚಹಾ ಮಾಡಲು ಅವರು ಹೊಟೇಲ್ ಒಳಗೆ ಹೋಗುತ್ತಿದ್ದಂತೆ ಹಿಂದಿನಿಂದ ಬಂದ ತಂಡ ಅವರ ತಲಾವರು ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಇದರಿಂದ ಇಮ್ತಿಯಾಝ್‌ರ ತಲೆ, ಕೈ ಹಾಗೂ ಬೆನ್ನಿಗೆ ಗಾಯಗಳಾಗಿವೆ.
ಬಳಿಕ ಅವರು ಹೋಟೇಲ್ ಹಿಂಬಾಗಿಲಿನಿಂದ ಓಡಿ ಸಮೀಪದ ಮನೆಯೊಂದಕ್ಕೆ ನುಗ್ಗಿ ದುಷ್ಕರ್ಮಿಗಳಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡಿರುವ ಇಮ್ತಿಯಾಝ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಮ್ತಿಯಾಝ್ ಅವರ ಮೇಲೆ ದಾಳಿ ನಡೆಯುತ್ತಿದ್ದ ವೇಳೆ ಹೋಟೆಲ್‌ನಲ್ಲಿದ್ದ ಇನ್ನೋರ್ವ ವ್ಯಕ್ತಿ ತಡೆಯಲು ಯತ್ನಿಸಿದಾಗ ತಂಡವು ಅವರ ಮೇಲೂ ದಾಳಿ ನಡೆಸಿದೆ ಎಂದು ತಿಳಿದು ಬಂದಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಆ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Comments are closed.