ಕರಾವಳಿ

ಹೆಂಗಸಿನ ವೇಷ ಧರಿಸಿ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಪ್ರಕರಣ : ಉರ್ವ ಪೊಲೀಸರಿಂದ ಬೆಂಗಳೂರಿನಲ್ಲಿ ಇಬ್ಬರ ಸೆರೆ

Pinterest LinkedIn Tumblr

ಮಂಗಳೂರು, ಆಕ್ಟೋಬರ್.03: ಹೆಂಗಸಿನ ವೇಷ ಧರಿಸಿ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಯವರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೆಂಗಳೂರು ಯಶವಂತಪುರ ನಿವಾಸಿ ಆದಿತ್ಯ ಯಾನೆ ಅಶ್ವಿನಿ ( 19) ಹಾಗೂ ಬೆಂಗಳೂರು ಕನಕಪುರ ರಸ್ತೆಯ ಬಸವೇಶ್ವರ ನಗರ ನಿವಾಸಿ ಅರುಣ್ ಹೆಚ್.ಎಸ್(27) ಎಂದು ಹೆಸರಿಸಲಾಗಿದೆ.

ಪ್ರಕರಣದ ದೂರುದಾರರನ್ನು ಬೆಂಗಳೂರು ಮೂಲದ ಆರಾಧ್ಯ ಎಂಬ ಹೆಂಗಸಿನ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡಿರುತ್ತಾರೆ. ದೂರುದಾರರು ಆರೋಪಿಯ ಬೇಡಿಕೆಯಂತೆ ತಮ್ಮ ಭಾವಚಿತ್ರವನ್ನು ಕಳುಹಿಸಿಕೊಟ್ಟಿದ್ದು, ಈ ಭಾವಚಿತ್ರವನ್ನು ಪಡೆದುಕೊಂಡ ಆರೋಪಿ ಪೊಲೀಸರಿಗೆ ದೂರು ನೀಡಿ ಜೈಲಿಗೆ ಕಳುಹಿಸುವುದಾಗಿ ಬ್ಲಾಕ್ ಮೇಲ್ ಮಾಡಿ ದೂರುದಾರರಿಂದ ರೂ 65.000/- ಹಣವನ್ನು ಬೆಂಗಳೂರಿನ ಯಶವಂತಪುರದಲ್ಲಿ ಪಡೆದುಕೊಂಡಿರುತ್ತಾರೆ.

ನಂತರದಲ್ಲಿ ಪದೇ ಪದೇ ಫೋನ್ ಮಾಡಿ ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುವ ಸಮಯ ಆರೋಪಿಗಳು ದೂರುದಾರರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಸೋಗಿನಲ್ಲಿ ಕರೆ ಮಾಡಿ ಹೆದರಿಸಿರುತ್ತಾರೆ. ಪ್ರಕರಣದ ಆರೋಪಿಗಳನ್ನು ದಿನಾಂಕ 02-10-2018 ರಂದು ಖಚಿತ ಮಾಹಿತಿ ಆಧಾರದ ಮೇಲೆ ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆ ಬಳಿ ಬಂಧಿಸಲಾಗಿದೆ.

ಈ ಪ್ರಕರಣದ ಮುಖ್ಯ ಆರೋಪಿ ಆರಾಧ್ಯ ಎಂಬ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದಾಕೆ ಪುರುಷ ವ್ಯಕ್ತಿ ಎಂಬುದು ದಸ್ತಗಿರಿ ಸಮಯ ತಿಳಿದು ಬಂದಿದ್ದು, ಹೆಂಗಸಿನ ವೇಷ ಧರಿಸಿ ದೂರುದಾರರನ್ನು ನಂಬಿಸಿ ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ದೂರು ದಾಖಲಾಗಿರುತ್ತದೆ.

ಪೊಲೀಸ್ ಆಯುಕ್ತರಾದ ಟಿ. ಆರ್ ಸುರೇಶ್, ಐ.ಪಿ.ಎಸ್, ಮಾನ್ಯ ಪೊಲೀಸ್ ಉಪ ಆಯುಕ್ತರಾದ (ಅಪರಾಧ& ಸಂಚಾರ) ಶ್ರೀಮತಿ ಉಮಾಪ್ರಶಾಂತ್, ಹಾಗೂ ಕೇಂದ್ರ ಉಪವಿಭಾಗದ ಎ.ಸಿ.ಪಿ ರವರಾದ ಉದಯ ನಾಯಕ್ ರವರ ಮಾರ್ಗದರ್ಶನದಲ್ಲಿ, ನಡೆದ ಕಾರ್ಯಾಚರಣೆಯಲ್ಲಿ ಉರ್ವ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.

Comments are closed.