ಮಂಗಳೂರು : ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿರುವ ಮಹಾರಾಷ್ಟ್ರ ಮೂಲದ ರಾಜೇಂದ್ರ ಪವಾರ್ ಎಂಬಾತನ ಚಿನ್ನದಂಗಡಿ ಮತ್ತು ಆತನ ಫ್ಲ್ಯಾಟ್‌ಗೆ ಕಸ್ಟಂಸ್ ತಂಡ ದಾಳಿ ನಡೆಸಿದೆ. ಈ ವೇಳೆ ಆತ ಅಲ್ಲಿರಲಿಲ್ಲ. ಮುಂಬಯಿಗೆ ಪರಾರಿಯಾಗಿರಬಹುದೆಂಬ ಶಂಕೆಯಲ್ಲಿ ಆತನ ಪತ್ತೆಗಾಗಿ ಕಸ್ಟಂಸ್ ತಂಡ ತನಿಖೆಯನ್ನು ಮುಂಬಯಿಗೂ ವಿಸ್ತರಿಸಿದೆ.
ಸೆ. 30ರಂದು ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕಾರನ್ನು ಉಪ್ಪಳ ಬಳಿ ಕಸ್ಟಂಸ್ ತಂಡ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾರಿನ ಹಿಂದಿನ ಆಸನದಲ್ಲಿ ಬಚ್ಚಿಡಲಾಗಿದ್ದ 1.20 ಕೋ. ರೂ. ಕಾಳಧನ ಪತ್ತೆಯಾಗಿದ್ದು, ಕಾರು ಚಾಲಕ ತಳಂಗರೆ ಕುನ್ನಿಲ್‌ನ ಬಶೀರ್(55)ನನ್ನು ಬಂಧಿಸಲಾಗಿತ್ತು.
ಬಳಿಕ ನಗರದ ಕೋಟೆ ರಸ್ತೆಯ ಬಾಡಿಗೆ ಮನೆಯೊಂದಕ್ಕೆ ದಾಳಿ ನಡೆಸಿ ಬಚ್ಚಿಡಲಾಗಿದ್ದ ಒಂದೂವರೆ ಕಿಲೋ ಚಿನ್ನವನ್ನು ಕಸ್ಟಂಸ್ ತಂಡ ವಶಪಡಿಸಿತ್ತು. ಈ ಸಂಬಂಧ ಅಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರ ಸಾಂಗ್ಲಿ ನಿವಾಸಿ ರಾಮಚಂದ್ರ ಪಾಟೀಲ್(27)ನನ್ನು ಬಂಧಿಸಲಾಗಿತ್ತು.
ಅವರಿಬ್ಬರನ್ನು ವಿಚಾರಣೆ ನಡೆಸಿದಾಗ ಈ ದಂಧೆಯ ಪ್ರಧಾನ ಸೂತ್ರಧಾರ ಮಂಗಳೂರಿನಲ್ಲಿ ಚಿನ್ನದಂಗಡಿ ನಡೆಸುತ್ತಿರುವ ರಾಜೇಂದ್ರ ಪವಾರ್ ಎಂಬ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಕಸ್ಟಂಸ್ ತಂಡ ಮಂಗಳೂರಿನ ಚಿನ್ನದಂಗಡಿ ಮತ್ತು ಮಾಲಕನ ನಿವಾಸಕ್ಕೂ ದಾಳಿ ನಡೆಸಿ ಹಲವು ಮಹತ್ತರ ದಾಖಲು ಪತ್ರಗಳನ್ನು ವಶಪಡಿಸಿದೆ. ಕಾಸರಗೋಡಿನ ಹಲವೆಡೆಗಳಲ್ಲಿ ದಾಳಿ ನಡೆಸಲಾಗಿದೆ. ಈ ವ್ಯವಹಾರದವರು ಕಾಸರಗೋಡಿನಲ್ಲಿ ಮಾತ್ರ 100 ಕೋಟಿ ರೂ.ಗಳ ಕಾಳಧನ ಮತ್ತು ಅಕ್ರಮ ಚಿನ್ನ ಸಾಗಾಟ ವ್ಯವಹಾರ ನಡೆಸಿದ್ದಾರೆ ಎಂದು ಕಸ್ಟಂಸ್‌ಗೆ ಮಾಹಿತಿ ಲಭಿಸಿದೆ.
ಕೊಲ್ಲಿಯಿಂದ ವಿಮಾನದಲ್ಲಿ ಮಂಗಳೂರು, ಕಲ್ಲಿಕೋಟೆ ವಿಮಾನ ನಿಲ್ದಾಣಗಳಲ್ಲಾಗಿ ಅಕ್ರಮವಾಗಿ ಚಿನ್ನವನ್ನು ಕಾಸರಗೋಡಿಗೆ ತಂದು ಅದನ್ನು ಚಿನ್ನದಂಗಡಿಯಲ್ಲಿ ಕರಗಿಸಿ ಇನ್ನೊಂದು ಚಿನ್ನದಂಗಡಿಗೆ ಮಾರಾಟ ಮಾಡುತ್ತಿರುವುದು ಈ ದಂಧೆಯ ರಹಸ್ಯ ವ್ಯವಹಾರವಾಗಿದೆ. ಈ ಜಾಲ ಕೊಲ್ಲಿ ರಾಷ್ಟ್ರದಲ್ಲಿ ಹಲವು ಕೊಂಡಿಗಳನ್ನು ಹೊಂದಿದೆ. ಕಸ್ಟಂಸ್ ವಿಭಾಗದ ಕಣ್ಣೂರು ಡಿವಿಶನ್ ಅಸಿಸ್ಟೆಂಟ್ ಕಮಿಷನರ್ ಒ. ಪ್ರದೀಪ್ ಮತ್ತು ಕಾಸರಗೋಡು ಸೂಪರಿಂಟೆಂಡೆಂಟ್ ಪಿ.ಪಿ.ರಾಜೀವ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
Comments are closed.