ಮಂಗಳೂರು, ಅಕ್ಟೋಬರ್.11 : ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಸಚಿವರಾದ ಬಿ.ಝಡ್. ಝಮೀರ್ ಅಹ್ಮದ್ ಅವರು ಗುರುವಾರ (11/10/2018) ಮಂಗಳೂರು ಬಿಜೈಯಲ್ಲಿ ಕಾರ್ಯಾಚರಿಸುತ್ತಿರುವ “ಸ್ನೇಹದೀಪ್” ಏಡ್ಸ್ ಪೀಡಿತ ಮಕ್ಕಳ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಸ್ನೇಹದೀಪ್ ಸಂಸ್ಥೆಗೆ ಸ್ವಂತ ಕಟ್ಟಡ ಖರೀದಿಸಲು 10 ಲಕ್ಷ ರೂ. ತನ್ನ ಸ್ವಂತ ಖಾಸಗಿ ಮೊತ್ತವನ್ನು ಘೋಷಿಸಿದರಲ್ಲದೇ ಅಗತ್ಯ ಬಿದ್ದರೆ 6 ತಿಂಗಳ ಬಳಿಕ ಮತ್ತಷ್ಟು ಮೊತ್ತ ನೀಡುವುದಾಗಿ ಭರವಸೆ ನೀಡಿದರು.
ಸ್ನೇಹದೀಪ್ ಸಂಸ್ಥೆಯು ತಬಸ್ಸುಮ್ ಅವರ ನೇತೃತ್ವದಲ್ಲಿ ಕಳೆದ 8 ವರ್ಷಗಳಿಂದ ಬಿಜೈ ಕಾಪಿಕಾಡ್’ನ ಬಾಡಿಗೆ ಮನೆಯೊಂದರಲ್ಲಿ ಕಾರ್ಯಾಚರಿಸುತ್ತಿದೆ. ಇಲ್ಲಿ ರಾಜ್ಯದ ವಿವಿಧ ಕಡೆಯ 22 ಎಚ್ಐವಿ ಸೋಂಕು ಬಾಧಿತ ಹೆಣ್ಮಕ್ಕಳನ್ನು ಪೋಷಿಸಲಾಗುತ್ತಿದೆ. ಮಾಸಿಕ 75,000/- ರೂ. ಖರ್ಚಾಗುತ್ತಿದ್ದು, ಬಹಳ ಕಷ್ಟದಲ್ಲಿ ಮುನ್ನಡೆಯುತ್ತಿರುವುದನ್ನು ಮನಗಂಡ ಸಚಿವ ಝಮೀರ್ ಅಹ್ಮದ್ ಸ್ವಂತ ಕಟ್ಟಡ ಖರೀದಿಸಲು 10 ಲಕ್ಷ ರೂ. ಸ್ವಂತ ಹಣ ನೀಡಲು ತೀರ್ಮಾನಿಸಿದ್ದಾರೆ.
ಇದರ ಜೊತೆಗೆ ಸ್ನೇಹದೀಪ್ ಕಟ್ಟಡ ಖರೀದಿಗಾಗಿ ನಗರಾಭಿವೃದ್ಧಿ, ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ 5 ಲಕ್ಷ ರೂ., ದ.ಕ.ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷರಾದ ಕಣಚೂರು ಮೋನು 5 ಲಕ್ಷ ರೂ., ವಿಶ್ವಾಸ್ ಬಾವಾ ಬಿಲ್ಡರ್ಸ್ ಮಾಲಕರಾದ ರವೂಫ್ ಪುತ್ತಿಗೆ 5 ಲಕ್ಷ ರೂ., ಕೆ.ಎಸ್.ಲತೀಫ್ ತುಂಬೆ 2 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ. ಸಚಿವರ ಭೇಟಿ ಸಂದರ್ಭ ಕಣಚೂರು ಮೋನು, ಯು.ಟಿ.ಇಫ್ತಿಕಾರ್, ರವೂಫ್ ಪುತ್ತಿಗೆ, ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಉಸ್ಮಾನ್, ವಕ್ಫ್ ಜಿಲ್ಲಾಧಿಕಾರಿ ಅಬೂಬಕರ್, ಟಿ.ಎಂ.ಶಹೀದ್ ಸುಳ್ಯ, ಕೆ.ಎಸ್.ಲತೀಫ್ ತುಂಬೆ ಮೊದಲಾದವರು ಉಪಸ್ಥಿತರಿದ್ದರು.
ಸ್ನೇಹದೀಪ್ ಅಧ್ಯಕ್ಷೆ ತಬಸ್ಸುಮ್ ಪ್ರಸ್ತಾವನೆಗೈದರು. ಟ್ರಸ್ಟಿ ರಶೀದ್ ವಿಟ್ಲ ಸ್ವಾಗತಿಸಿ ವಂದಿಸಿದರು. ಸಂಸ್ಥೆಯ ವತಿಯಿಂದ ಸಚಿವ ಝಮೀರ್ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ಸಚಿವ ಝಮೀರ್ ಅವರು ಸ್ನೇಹದೀಪಕ್ಕೆ ಕಟ್ಟಡ ಖರೀದಿಸಲು ಕಣಚೂರು ಮೋನು, ಯು.ಟಿ.ಇಫ್ತಿಕಾರ್ ಹಾಗೂ ರಶೀದ್ ವಿಟ್ಲ ಅವರನ್ನು ಸಂಚಾಲಕರನ್ನಾಗಿ ನೇಮಿಸಿದರು.
Comments are closed.