ಕರಾವಳಿ

ಶಿಷ್ಯವೇತನಕ್ಕೆ ಆಗ್ರಹಿಸಿ ಗೃಹವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಂದ ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್.22: ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಗೃಹ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಆಗ್ರಹಿಸಿ ಸೋಮವಾರ ಬೆಳಗ್ಗೆ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದರು.

ಸರಕಾರಿ ಕೋಟಾದಿಂದ ನೇಮಕಗೊಂಡಿರುವ 51 ಗೃಹ ವೈದ್ಯರು ಹಾಗೂ 38 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ 2017ರವರೆಗೆ ಶಿಷ್ಯವೇತನ ದೊರೆಯುತ್ತಿತ್ತು. ಆದರೆ ಕಳೆದ ಎಂಟು ತಿಂಗಳಿನಿಂದ ಶಿಷ್ಯವೇತನ ಸಿಗುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ, ಶಿಕ್ಷಣ ಸಚಿವರಿಗೆ, ಆರೋಗ್ಯ ಸಚಿವರಿಗೆ, ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ ಎಲ್ಲ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ರಾಜೇಶ್ವರಿದೇವಿ ಧರಣಿನಿರತರ ಸಮಸ್ಯೆಯ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲಾಗುವುದು. ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ಹಿಂಪಡೆದ ಗೃಹ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ಸಮಸ್ಯೆಯ ಬಗೆಹರಿಯದಿದ್ದಲ್ಲಿ ನವೆಂಬರ್ 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಪ್ರಸಾದ್ ಎಂ.ಬಿ. ಮತ್ತು ಉಜ್ವಲ್ ಸುವರ್ಣ ಧರಣಿಯ ನೇತೃತ್ವ ವಹಿಸಿದ್ದರು.

ವರದಿ ಕೃಪೆ : ವಾಭಾ

Comments are closed.