ಮಂಗಳೂರು ಅಕ್ಟೋಬರ್ 27 :ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ರನ್ ವೇ ವಿಸ್ತರಣೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಇನ್ನಷ್ಟು ಚುರುಕುಗೊಳಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸೂಚಿಸಿದ್ದಾರೆ.
ಅವರು ಶುಕ್ರವಾರ ಮಂಗಳೂರು ವಿಮಾನನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದರು. ರನ್‍ವೇ ವಿಸ್ತರಣೆ ಸೇರಿದಂತೆ ಮಂಗಳೂರು ವಿಮಾನನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಇಲ್ಲಿನ ದೀರ್ಘಕಾಲದ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತಾ ಕಾಮಗಾರಿ ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ರಾಜ್ಯ ಸರಕಾರದ ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಅವರು ತಿಳಿಸಿದರು.
ವಿಮಾನ ನಿಲ್ದಾಣದಿಂದ ಮಂಗಳೂರು ನಗರದ ವಿವಿಧ ಭಾಗಗಳಿಗೆ ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಿಗೆ ಕೆ.ಎಸ್.ಆರ್.ಟಿ.ಸಿ. ವತಿಯಿಂದ ಬಸ್ ಸಂಚಾರ ಆರಂಭಿಸಲು ಅವರು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂಗಳೂರು ವಿಮಾನನಿಲ್ದಾಣದಲ್ಲಿ ಅಲ್ಲಿಂದ ಬೆಂಗಳೂರಿನ ವಿವಿಧ ಭಾಗಗಳಿಗೆ ಬಿಎಂಟಿಸಿ ಬಸ್ ಸಂಚಾರ ಯಶಸ್ವಿಯಾಗಿದೆ. ಇದೇ ರೀತಿ ಮಂಗಳೂರ ವಿಮಾನನಿಲ್ದಾಣದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಮುಖ್ಯ ಕಾರ್ಯದಶಿಗಳು ತಿಳಿಸಿದರು. ಈಗಾಗಲೇ ಮಂಗಳೂರು ವಿಮಾನನಿಲ್ದಾಣದಿಂದ ಮಣಿಪಾಲಕ್ಕೆ ಬಸ್ ಸಂಚಾರಕ್ಕೆ ಆರ್‍ಟಿಎ ಅನುಮತಿ ಈಗಾಗಲೇ ಸಿಕ್ಕಿರುವುದರಿಂದ ಶೀಘ್ರವೇ ಸಂಚಾರ ಆರಂಭಿಸಲು ಅವರು ನಿರ್ದೇಶಿಸಿದರು.
ಮಂಗಳೂರು ವಿಮಾನನಿಲ್ದಾಣ ನಿರ್ದೇಶಕ ವಿ.ವಿ. ರಾವ್ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು. ಪಡೀಲ್ ಡಿ.ಸಿ. ಕಚೇರಿ: ನಂತರ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು, ನಗರದ ಪಡೀಲ್‍ನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಿದರು. ಕಾಮಗಾರಿಯನ್ನು ಗುಣಮಟ್ಟದಲ್ಲಿ ನಡೆಸಿ, ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಸ್ವಂತ ಕಟ್ಟಡ ಹೊಂದಿಲ್ಲದ, ಎಲ್ಲಾ ಜಿಲ್ಲಾ ಮಟ್ಟದ ಸರಕಾರಿ ಕಚೇರಿಗಳನ್ನು ಇಲ್ಲಿಗೆ ವರ್ಗಾಯಿಸಲು ಅವರು ಸೂಚಿಸಿದರು.
ಬಳಿಕ ಸುರತ್ಕಲ್‍ಗೆ ಭೇಟಿ ನೀಡಿದ ಮುಖ್ಯ ಕಾರ್ಯದರ್ಶಿಗಳು, ಅಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಮಾರುಕಟ್ಟೆ ಸಂಕೀರ್ಣವನ್ನು ವೀಕ್ಷಿಸಿದರು. ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಅವರು ಮುಖ್ಯ ಕಾರ್ಯದರ್ಶಿಗಳಿಗೆ ವಿವಿರ ನೀಡಿದರು.
ಮಧ್ಯ ವಸತಿ ಶಾಲೆಗೆ ಭೇಟಿ: ವಿಜಯ ಭಾಸ್ಕರ್ ಅವರು ನಂತರ ಸುರತ್ಕಲ್ ಮಧ್ಯಪದವಿನಲ್ಲಿರುವ ಪರಿಶಿಷ್ಟ ವರ್ಗಗಳ ಕೇಂದ್ರೀಯ ಮಾದರಿ ವಸತಿ ಶಾಲೆಗೆ ಭೇಟಿ ನೀಡಿದರು. ಶಾಲೆಯ ಪ್ರಗತಿ ಬಗ್ಗೆ ಅಲ್ಲಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಶಾಲೆಗೆ ಇನ್ನಷ್ಟು ವಿದ್ಯಾರ್ಥಿಗಳನ್ನು ಆಕರ್ಷಿಸಲು ಕಾರ್ಯಕ್ರಮ ಹಾಕಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಶಾಲೆಯ ಫಲಿತಾಂಶವನ್ನು ಉತ್ತಮಪಡಿಸಲು ಒತ್ತು ನೀಡಬೇಕು. ಗುಣಮಟ್ಟದ ಆಹಾರ ನೀಡುವಂತೆ ತಿಳಿಸಿದರು. ಐಟಿಡಿಪಿ ಯೋಜನಾ ನಿರ್ದೇಶಕಿ ಹೇಮಲತಾ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.
ಎನ್‍ಎಂಪಿಟಿ: ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಇಂದು ನವಮಂಗಳೂರು ಬಂದರಿಗೆ ಭೇಟಿ ನೀಡಿ, ಅಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಎನ್‍ಎಂಪಿಟಿ ಪ್ರಗತಿ ಬಗ್ಗೆ ಮಾಹಿತಿ ಪಡೆದ ಅವರು ಎನ್‍ಎಂಪಿಟಿ ಅಭಿವೃದ್ಧಿಗೆ ಪೂರಕವಾದ ಅಗತ್ಯ ಮೂಲಸೌಕರ್ಯಗಳನ್ನು ರಾಜ್ಯ ಸರಕಾರ ಒದಗಿಸಲಿದೆ ಎಂದು ಹೇಳಿದರು. ಎನ್‍ಎಂಪಿಟಿ ಮೂಲಕ ರಾಜ್ಯದ ಕಾಫಿ ರಫ್ತು ಇನ್ನಷ್ಟು ಹೆಚ್ಚಿಸಲು ಒತ್ತು ನೀಡಬೇಕು. ವಿದೇಶಗಳಿಂದ ಎನ್‍ಎಂಪಿಟಿಗೆ ಪ್ರಯಾಣಿಕ ಹಡಗುಗಳಲ್ಲಿ ವಿದೇಶೀ ಪ್ರವಾಸಿಗರು ಬಂದಾಗ ಅವರಿಗೆ ರಾಜ್ಯದ ಸಂಸ್ಕೃತಿ, ಕಲೆ ಪರಿಚಯಿಸಲು ಮತ್ತು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಮೂಲಕ ಯೋಜನೆ ಹಾಕಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. 2017-18ರಲ್ಲಿ ಸುಮಾರು 22 ವಿದೇಶೀ ಪ್ರಯಾಣಿಕ ಹಡಗುಗಳ ಮೂಲಕ 24258 ಪ್ರವಾಸಿಗರು ಎನ್‍ಎಂಪಿಟಿಗೆ ಬಂದಿರುವುದಕ್ಕೆ ಮುಖ್ಯ ಕಾರ್ಯದರ್ಶಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಳಾಯಿ ಮೀನುಗಾರಿಕಾ ಬಂದರಿಗೆ ಈಗಾಗಲೇ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರ ಕಾಮಗಾರಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂದು ಅವರು ತಿಳಿಸಿದರು. ಶಿರಾಡಿ ಘಾಟಿ ರಸ್ತೆಯು ಎನ್‍ಎಂಪಿಟಿ ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಇದರ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಎನ್‍ಎಂಪಿಟಿ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.
ಮುಖ್ಯ ಕಾರ್ಯದರ್ಶಿಗಳು, ಬಳಿಕ ಎನ್‍ಎಂಪಿಟಿ ಮುಖ್ಯ ಪ್ರಾಂಗಣಕ್ಕೆ ಭೇಟಿ ನೀಡಿದರು. ಅಲ್ಲಿನ ಹಡಗಿನಲ್ಲಿ ಸಂಚರಿಸಿ, ಎನ್‍ಎಂಪಿಟಿಯ ವಿವಿಧ ಬರ್ತ್‍ಗಳಿಗೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಿದರು. ಎನ್‍ಎಂಪಿಟಿ ಮುಖ್ಯ ಭದ್ರತಾ ಅಧಿಕಾರಿ ಶ್ರೀಕೃಷ್ಣ, ಕಾರ್ಯದರ್ಶಿ ಬಿಜು ವಾರಿಯರ್, ವಿವಿಧ ವಿಭಾಗಗಳ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.
ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
Comments are closed.