ಕರಾವಳಿ

ವಿವಾದಾತ್ಮಕ ಹೇಳಿಕೆ ಆರೋಪ : ವಿಎಚ್‌ಪಿ ಮುಖಂಡ ಶೇಣವ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಇತ್ತೀಚಿಗೆ ನಡೆದ ಪ್ರತಿಭಟನೆಯೊಂದರಲ್ಲಿ ವಿಶ್ವ ಹಿಂದ್ ಪ್ರಮುಖ್ ಜಗದೀಶ ಶೇಣವ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯೊಂದರ ವಿರುದ್ಧ ವಿವಿಧ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದೇ ಸಂದರ್ಭದಲ್ಲಿ ಶೇಣವ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುದ್ರೋಳಿಯ ಕಸಾಯಿಖಾನೆ ಮುಚ್ಚುವಂತೆ ಹಾಗೂ ವಿವಿಧ ಭೇಡಿಕೆಗಳಿಗೆ ಆಗ್ರಹಿಸಿ ವಿಎಚ್‌ಪಿ ಹಾಗೂ ಬಜರಂಗದಳದ ವತಿಯಿಂದ ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯೊಂದರಲ್ಲಿ ವಿಶ್ವ ಹಿಂದ್ ಪ್ರಮುಖ್ ಜಗದೀಶ ಶೇಣವ ಅವರು ‘ಕುದ್ರೋಳಿ ಭಯೋತ್ಪಾದನಾ ಕೇಂದ್ರ’ ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಶೇಣವ ವಿರುದ್ಧ ಕಾನೂನು ಹೋರಾಟ ನಡೆಸಲು ಮುಂದಾಗಿರುವ ವಿವಿಧ ಸಂಘ ಸಂಸ್ಥೆಗಳ ನಾಯಕರು, ಹಿರಿಯರು ಸೇರಿ ಮಂಗಳೂರು ಕಮಿಷನರ್ ಸುರೀಶ್ ಅವರನ್ನು ಭೇಟಿ ಮಾಡಿ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಮನವಿ ಸಲ್ಲಿಸಿದ್ದರು.

ಮನವಿಯ ಪ್ರತಿಯನ್ನು ರಾಜ್ಯ ಪಾಲರು, ಮುಖ್ಯಮಂತ್ರಿ ಸಮೇತ ವಿವಿಧ ಗಣ್ಯರಿಗೆ ಕಳುಸಿಕೊಡಲಾಗಿತ್ತು. ಇದರ ಫಲಶ್ರುತಿ ಎಂಬಂತೆ ಇದೀಗ ಬರ್ಕೆ ಪೊಲೀಸ್ ಠಾಣೆಯಲ್ಲಿ ಶೇಣವ ವಿರುದ್ಧ ಪ್ರಕರಣ ದಾಖಲಾಗಿದೆ. ಬರ್ಕೆ ಠಾಣೆಗೂ ಭೇಟಿ ನೀಡಿದ ಮುಸ್ಲಿಂ ಸೌಹಾರ್ದ ವೇದಿಕೆ ನಾಯಕರು ಶೇಣವ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಠಾಣಾಧಿಕಾರಿಯಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Comments are closed.