ಮಾಜಿ ಶಾಸಕ ಗೋಪಾಲ ಪೂಜಾರಿ ಪರ ಅನುಕಂಪದ ಅಲೆ | ಶಾಸಕ ಸುಕುಮಾರ ಶೆಟ್ಟಿ ವಿರುದ್ದ ಅಸಮಧಾನದ ಹೊಗೆ
ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಯಡಿಯೂರಪ್ಪನವರ ರಾಜೀನಾಮೆ ಬಳಿಕ ತೆರವಾದ ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆ ಇದೀಗ ತಾರಕಕ್ಕೇರಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿ ಮುಖಂಡರುಗಳು ಗೆಲುವಿಗೆ ಶತಾಯಗತಾಯವೆಂಬಂತೆ ಹೋರಾಟ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಮಾಜಿ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಪ್ರತಿಸ್ಪರ್ಧಿಯಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರ ಮಧುಬಂಗಾರಪ್ಪ ಕಣದಲ್ಲಿದ್ದಾರೆ. ಈರ್ವರು ಮುಖ್ಯಮಂತ್ರಿಗಳ ಸುಪುತ್ರರು ಚುನಾವಣಾ ಕಣದಲ್ಲಿರುವುದರಿಂದ ಇದೀಗ ಎಲ್ಲರ ಗಮನ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೇಲೆ ನೆಟ್ಟಿರುವುದು ಗಮನಾರ್ಹ.
(ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ)
ಬೈಂದೂರು ವಿಧಾನಸಭಾ ಕ್ಷೇತ್ರದ ಸಮೀಕ್ಷೆ:
ಉಪಚುನಾವಣೆಯ ಕಾವು ಜೋರಾಗುತ್ತಿದ್ದಂತೆಯೇ ಕೆಲವೊಂದು ರಾಜಕೀಯ ಲೆಕ್ಕಾಚಾರಗಳು ಕ್ಷೇತ್ರದಲ್ಲಿ ಹರಿದಾಡತೊಡಗಿದೆ. ಅಂತೆಯೇ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದು ಸುಳ್ಳಲ್ಲ. ಈಗಾಗಲೇ ಶಾಸಕ ಸುಕುಮಾರ ಶೆಟ್ಟಿ ಹಾಗೂ ಮಾಜಿ ಶಾಸಕ ಗೋಪಾಲ ಪೂಜಾರಿಯವರ ತಂಡ ಕ್ಷೇತ್ರದಾದ್ಯಂತ ಓಡಾಟ ನಡೆಸುತ್ತಿದೆ. ಬೈಂದೂರಿನಲ್ಲಿ ಜೆಡಿಎಸ್ ಪ್ರಾಬಲ್ಯ ಇಲ್ಲದಿದ್ದರೂ, ಮಾಜಿ ಶಾಸಕ ಗೋಪಾಲ ಪೂಜಾರಿಯವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಧುಬಂಗಾರಪ್ಪನವರ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಎರಡು ಅವಧಿಗೆ ಬಿಜೆಪಿಯಿಂದ ಆಯ್ಕೆಯಾದ ಬಿವೈ ರಾಘವೇಂದ್ರ ಹಾಗೂ ಯಡಿಯೂರಪ್ಪನವರು ಬೈಂದೂರು ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅತೀ ವಿರಳ. ಈರ್ವರು ಬೈಂದೂರು ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂಬ ಆರೋಪಗಳು ರಾಜಕೀಯವ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ವಿರುದ್ದ ಮತಗಳಾಗಿ ಪರಿವರ್ತನೆಯಾಗುವುದಾದರೆ ಮೈತ್ರಿಕೂಟಕ್ಕೆ ಒಂದಷ್ಟು ಲಾಭವಾಗುವುದು ಖಚಿತ. ಆದರೆ ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿ ಹಾಗೂ ಕರಾವಳಿಯ ಶಾಸಕರುಗಳ ನಿರಂತರ ಓಡಾಟ, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಗಮನದಲ್ಲಿಟ್ಟುಕೊಂಡರೆ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಮನ್ನಡೆ ಬರುವುದು ಅಲ್ಲಗಳೆಯುವಂತಿಲ್ಲ.
ಉಪಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಸಮಬಲದ ಹೋರಾಟ ನಡೆಯುವ ಸಾಧ್ಯತೆಗಳಿದ್ದು, ಬಿಜೆಪಿಗೆ ಕಳೆದ ಬಾರಿ ಸಿಕ್ಕಿರುವ ಮುನ್ನಡೆ ಈ ಬಾರಿ ಸಿಗಲಿಕ್ಕಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿಯವರ ಬಗ್ಗೆ ಅಸಮಧಾನ ಇದ್ದರೂ ಕೂಡ ಮುಖಂಡರುಗಳು ಕಾರ್ಯಕರ್ರ್‍ಅತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರಿಂದ ದೊಡ್ಡಮಟ್ದ ವ್ಯತ್ಯಾಸಗಳೇನು ಆಗಲಿಕ್ಕಿಲ್ಲ. ಬೈಂದೂರು ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು, ಮಾಜಿ ಶಾಸಕ ಗೋಪಾಲ ಪೂಜಾರಿಯವರ ಬಗ್ಗೆ ಅನುಕಂಪವೂ ಹೆಚ್ಚಾಗಿದೆ. ಇದು ಮತಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂಬುವುದು ರಾಜಕೀಯ ವಿಶ್ಲೇಷಕರ ಮಾತು.
(ಬೈಂದೂರಿನ ಶಾಸಕ ಸುಕುಮಾರ ಶೆಟ್ಟಿ)
(ಮಾಜಿ ಶಾಸಕ ಗೋಪಾಲ ಪೂಜಾರಿ)
ಬಲಾಡ್ಯ ನಾಯಕರ ನಿರಂತರ ಓಡಾಟ
ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಗಣನೀಯ ಸಂಖ್ಯೆಯಲ್ಲಿ ಮತಗಳನ್ನು ಪಡೆದಿದ್ದರೂ ಕೂಡ ಅದರದ್ದೆ ಆದಂತಹ ಪ್ರಭಲವಾದ ಸಂಘಟನೆ, ಕಾರ್ಯಕರ್ತರ ಪಡೆ ಇಲ್ಲ. ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿರುವುದರಿಂದ ಮತಗಳು ಒಡೆಯುವುದಿಲ್ಲ. ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ವೀರಪ್ಪ ಮೊಯ್ಲಿ ಪ್ರವೇಶದಿಂದಾಗಿ ಬಿಜೆಪಿಗೆ ಸುಲಭ ಜಯ ದಕ್ಕುವುದಿಲ್ಲ. ರಾಜ್ಯ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ, ಪರಿಷತ್ ಸದಸ್ಯ ಭೋಜೇ ಗೌಡ, ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಮಾಜಿ ಶಾಸಕರುಗಳಾದ ಗೋಪಾಲ ಭಂಡಾರಿ, ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಮುಂತಾದ ಮುಖಂಡರುಗಳ ನಿರಂತರ ಓಡಾಟದಿಂದಾಗಿ ಎದುರಾಳಿ ಬಿಜೆಪಿಗೆ ಸ್ವಲ್ಪ ಮಟ್ಟಿನ ಬಿಸಿ ಮುಟ್ಟಿದೆ.
ಕಾರ್ಯಕರ್ತರ ಹುಮ್ಮಸ್ಸು ಬಿಜೆಪಿಗೆ ವರದಾನ
ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಗಾಬೇಕೆನ್ನುವುದು ಬಿಜೆಪಿ ಕಾರ್ಯಕರ್ತರ ಬಯಕೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಹುಮ್ಮಸ್ಸಿನಿಂದಲೇ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ಯಡಿಯೂರಪ್ಪ, ಬಿ.ವೈ ರಾಘವೇಂದ್ರ, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶೀನಿವಾಸ ಪೂಜಾರಿ, ನಟಿ ತಾರಾ, ಕರಾವಳಿಯ ಶಾಸಕರು ಬೈಂದೂರಿನಲ್ಲಿ ಬೀಡುಬಿಟ್ಟಿದ್ದು, ಬಿವೈ ರಾಘವೇಂದ್ರ ಗೆಲುವಿಗೆ ಶ್ರಮಿಸುತ್ತಿದ್ದಾರೆ. ದೊಡ್ಡಮಟ್ಟದ ಕಾರ್ಯಕರ್ತರ ಪಡೆ ಬಿಜೆಪಿಗೆ ವರದಾನವಾಗಲಿದೆ.
Comments are closed.