ಮಂಗಳೂರು, ನವೆಂಬರ್.05 ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಲೇಡಿಹಿಲ್ ಹಾಗೂ ಕಾರ್‌ಸ್ಟ್ರೀಟ್ ಗಳಲ್ಲಿ ನಡೆದ ದರೋಡೆ ಪ್ರಕರಣಗಳನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಸೆರೆ ಹಿಡಿದು, ಬಂಧಿತರಿಂದ 1.75 ಕೋಟಿ ರೂ. ನಗದು ಹಾಗೂ ಒಂದು ಕಾರು ವಶ ಪಡಿಸಿಕೊಳ್ಳುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಟಿ.ಆರ್.ಸುರೇಶ್ ಅವರು ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಅರೋಪಿಗಳನ್ನು ಬಂಟ್ವಾಳ ತಾಲೂಕಿನ ತಲಪಾಡಿ ಬಿ.ಸಿ.ರೋಡ್ ನಿವಾಸಿ ಅಬ್ದುಲ್ ಮನಾನ್ (29) ಹಾಗೂ ಪಡೀಲ್ ನಿವಾಸಿ ರಾಝಿಕ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿದರು.
ಘಟನೆ ವಿವರ :
ಅಕ್ಟೋಬರ್ 23ರಂದು ಮಧ್ಯಾಹ್ನ ಮಂಜುನಾಥ ಗಣಪತಿ ಪಾಲಂನಕರ ಎಂಬವರು ಮುಂಬೈನಿಂದ ಖಾಸಗಿ ಬಸ್ ನಲ್ಲಿ ಬಂದು ಲೇಡಿಹಿಲ್ ಬಸ್ ನಿಲ್ದಾಣ ಬಳಿ ಇಳಿದುಕೊಂಡಿದ್ದರು. ರಸ್ತೆ ದಾಟುವ ವೇಳೆ ದುಷ್ಕರ್ಮಿಗಳಿಬ್ಬರು ತನ್ನನ್ನು ತಡೆದು ಕಾರಿನಲ್ಲಿ ಅಪಹರಿಸಿ, ನಗದು ಮತ್ತು 2 ಮೊಬೈಲ್ ಗಳನ್ನು ಕಸಿದು ಪರಾರಿಯಾಗಿದ್ದರು ಎಂದು ಘಟನೆ ನಡೆದ ಮೂರು ದಿನಗಳ ಬಳಿಕ ಉರ್ವ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು.
ಪ್ರಕರಣದ ಬೆನ್ನತ್ತಿದ ಮಂಗಳೂರು ನಗರ ಪೊಲೀಸ್ ಆಯುಕ್ತರು ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಪ್ರಕರಣ ಭೇದಿಸಿದ ವಿಶೇಷ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ 1.75 ಕೋಟಿ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. 1.40 ಕೋಟಿ ರೂ. ಮೌಲ್ಯದ 2000 ಮುಖಬೆಲೆಯ ನೋಟುಗಳು, 30 ಲಕ್ಷ ರೂ. ಮೌಲ್ಯದ 500 ರೂ. ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಹಣವು ಕಾರ್ ಸ್ಟ್ರೀಟ್ ನಲ್ಲಿರುವ ವೈಷ್ಣವಿ ಬೆಳ್ಳಿ ಆಭರಣಗಳ ಮಳಿಗೆ ಮಾಲಕರಿಗೆ ಸೇರಿದ್ದಾಗಿದ್ದು, ಹಣವನ್ನು ಮುಂಬೈನಿಂದ ಮಂಗಳೂರಿಗೆ ತರುವಾಗ ಆರು ಮಂದಿ ದುಷ್ಕರ್ಮಿಗಳು ಸೇರಿ ದರೋಡೆ ಮಾಡಿದ್ದರು ಎಂದು ಕಮಿಷನರ್ ವಿವರಿಸಿದರು.
ವಿಶೇಷ ತಂಡದಲ್ಲಿ ಸಿಸಿಬಿ ಪೊಲೀಸ್ ನಿರೀಕ್ಷಕ ಶಾಂತಾರಾಮ್, ಪಿಎಸ್ಸ್‌ಐ ಶ್ಯಾಮ್ ಸುಂದರ್, ಸಿಬ್ಬಂದಿ ಚಂದ್ರಶೇಖರ, ರಾಮಣ್ಣ, ರಾಜ, ಚಂದ್ರ ಅಡ್ಡೂರು, ಚಂದ್ರಹಾಸ್ ಸನಿಲ್, ಸೀನಪ್ಪ ಪೂಜಾರಿ, ರಾಜೇಂದ್ರ ಹಾಗೂ ಉರ್ವ ಠಾಣೆ ಪೊಲೀಸ್ ನಿರೀಕ್ಷಕ ರವೀಶ್ ಎಸ್. ನಾಯಕ್, ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
Comments are closed.