ಕುಂದಾಪುರ: ಕೆಲವು ಸಮಯಗಳಿಂದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಶುಕ್ರವಾರ ತಡರಾತ್ರಿ ಬೋನಿಗೆ ಬಿದ್ದ ಘಟನೆ ಕುಂದಾಪುರ ತಾಲೂಕಿನ ಕಾಳಾವರದ ಕಕ್ಕೇರಿ ಎಂಬಲ್ಲಿ ನಡೆದಿದೆ.
ಇಲ್ಲಿನ ವಾರಾಹಿ ಕಾಲುವೆ ಬಳಿಯ ಹಾಡಿ ಪ್ರದೇಶದಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆಯೇ ಇಲ್ಲಿನ ನಿವಾಸಿ ಚಂದ್ರಶೇಖರ ಹೆಗ್ಡೆ ಎನ್ನುವವರ ಜಾಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಳೆದ ವಾರ ಬೋನ್ ಇಟ್ಟು ನಾಯಿ ಕಟ್ಟಿ ಚಿರತೆ ಸೆರೆಗೆ ಕಾರ್ಯತಂತ್ರ ರೂಪಿಸಿದ್ದರು.
ವಾರಗಳ ಬಳಿಕ ಬಿತ್ತು ಹೆಣ್ಣು ಚಿರತೆ!
ಶುಕ್ರವಾರ ತಡರಾತ್ರಿ ಬೋನಿನಲ್ಲಿ ಚಿರತೆ ಸೆರೆಯಾಗಿದ್ದು ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. 4-5 ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದ್ದು ಸೆರೆಯಾದ ಚಿರತೆಯನ್ನು ತಡರಾತ್ರಿಯೇ ವನ್ಯಜೀವಿ ವಲಯಕ್ಕೆ ರವಾನಿಸಿ ಸುರಕ್ಷಿತವಾಗಿ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಕೂಡ ಚಿರತೆ ಓಡಾಟದ ಬಗ್ಗೆ ಜನರಿಂದ ದೂರುಗಳಿರುವ ಹಿನ್ನೆಲೆ ಬೋನು ಅಲ್ಲಿಯೇ ಇಡಲಾಗುತ್ತೆ ಎಂದಿದ್ದಾರೆ.
ಡಿ.ಎಫ್.ಒ ಪ್ರಭಾಕರನ್ ಮಾರ್ಗದರ್ಶನದಲ್ಲಿ ಎ.ಸಿ.ಎಫ್ ಲೋಹಿತ್, ಆರ್.ಎಫ್.ಒ ಪ್ರಭಾಕರ್ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಉದಯ್, ಅರಣ್ಯ ರಕ್ಷಕರಾದ ಶಂಕರ್ ಖಾರ್ವಿ, ಸೋಮಶೇಖರ್, ಬಸವರಾಜ್, ಇಲಾಖೆ ವಾಹನ ಚಾಲಕ ಅಶೋಕ್ ಈ ಕಾರ್ಯಾಚರಣೆಯಲ್ಲಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.