ಮಂಗಳೂರು, ನವೆಂಬರ್.10: ದ.ಕ.ಜಿಲ್ಲಾಡಳಿತದ ವತಿಯಿಂದ ಶನಿವಾರ ದ.ಕ.ಜಿಪಂ ಸಭಾಂಗಣದಲ್ಲಿ ಹಝ್ರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಯಿತು.ಹಲವರ ವಿರೋಧದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಟಿಪ್ಪು ಜಯಂತಿ ಆಚರಿಸಲಾಯಿತು.
ಈ ವೇಳೆ ನಡೆದ ಸಭಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಟಿಪ್ಪು ವೀರ ಪುರುಷ. ದೇಶಪ್ರೇಮಿ, ಸ್ವಾತಂತ್ರ ಹೋರಾಟಗಾರ. ಅಂತಹ ಮಹಾನ್ ನಾಯಕನ ಬಗ್ಗೆ ಸಾರ್ವಜನಿಕರಿಗೆ ತಿಳಿಯಬೇಕು ಎಂಬ ಉದ್ದೇಶ ದಿಂದಲೇ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಜಯಂತಿ ಆಚರಣೆಗೆ ಚಾಲನೆ ನೀಡಿದರು. ಅದಕ್ಕೆ ಕೆಲವರ ವಿರೋಧವಿದೆ, ನಿಜ. ಆದರೆ ಕದ್ದು ಮುಚ್ಚಿ ಆಚರಿಸದೆ ಸಾರ್ವಜನಿಕವಾಗಿ ಕಾರ್ಯಕ್ರಮ ಏರ್ಪಡಿಸುವ ವ್ಯವಸ್ಥೆಯನ್ನು ಮುಂದಿನ ವರ್ಷ ಮಾಡಬೇಕಿದೆ ಎಂದು ನುಡಿದರು.
ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎ. ಉದಯ ಕುಮಾರ್ ಟಿಪ್ಪು ಜಯಂತಿಯ ಸಂದೇಶ ನೀಡಿದರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ವಿದೇಶದಲ್ಲಿರುವ ಕಾರಣ ಅವರ ಸಂದೇಶವನ್ನು ವಾಚಿಸಲಾಯಿತು.
ಅತಿಥಿಗಳಾಗಿ ಮೇಯರ್ ಭಾಸ್ಕರ್ ಕೆ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಲ್ಲಾ ಎಸ್ಪಿ ಡಾ.ಬಿ.ಆರ್.ರವಿಕಾಂತೇ ಗೌಡ, ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್, ಜಿಪಂ ಸಿಇಒ ಡಾ. ಸೆಲ್ವಮಣಿ ಆರ್., ಅಪರ ಜಿಲ್ಲಾಧಿಕಾರಿ ಕುಮಾರ್, ದ.ಕ.ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ.ಇಬ್ರಾಹೀಂ ಭಾಗವಹಿಸಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್ :
ಟಿಪ್ಪು ಜಯಂತಿ ಆಚರಣೆಗೆ ಹಲವರ ವಿರೋಧದ ಹಿನ್ನೆಲೆಯಲ್ಲಿ ಜಿಪಂ ಸಭಾಂಗಣದ ಆವರಣ ಸುತ್ತಮುತ್ತ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ತಪಾಸಣೆ ಮಾಡಿ ಸಭಾಂಗಣದೊಳಗೆ ಬಿಡಲಾಯಿತು.
Comments are closed.