ಕರಾವಳಿ

ತೋಟ ಬೆಂಗ್ರೆ ಗ್ಯಾಂಗ್ ರೇಪ್ ಪ್ರಕರಣ : ಎಎಸ್ಸೈ ರಘುರಾಮ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

ಮಂಗಳೂರು: ನಗರದ ತಣ್ಣೀರು ಬಾವಿ ಸಮೀಪದ ತೋಟ ಬೆಂಗ್ರೆಗೆ ಪ್ರೇಮಿಯೊಂದಿಗೆ ವಿಹಾರಕ್ಕೆ ಬಂದಿದ್ದ‌ ಯುವತಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ನೀಡಿದ ದೂರು ಸ್ವಿಕರಿಸಲು ನಿರಾಕರಿಸಿದ ಆರೋಪದಲ್ಲಿ ಈಗಾಗಲೇ ಇಲಾಖೆಯಿಂದ ಅಮಾನತುಗೊಂಡಿದ್ದ ಬಂಟ್ವಾಳ ಎಎಸ್ಸೈ ರಘುರಾಮ್ ಹೆಗ್ಡೆಗೆ ಮತ್ತೊಂದು ಸಂಕಟ ಎದುರಾಗಿದೆ.

ಅತ್ಯಾಚಾರ ಸಂತ್ರಸ್ತೆಯ ದೂರು ದಾಖಲಿಸದೆ ಕರ್ತವ್ಯ ಲೋಪ ಎಸಗಿರುವ ಆರೋಪದಡಿ ಬಂಟ್ವಾಳ ಎಎಸ್ಸೈ ರಘುರಾಮ್ ಹೆಗ್ಡೆ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ್ತಿಲ ಗ್ರಾಮದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ನ. 20ರಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ, ಠಾಣಾ ಪ್ರಭಾರ ಕರ್ತವ್ಯದಲ್ಲಿದ ಎಎಸ್ಸೈ ರಘುರಾಮ್ ಹೆಗ್ಡೆ ದೂರು ದಾಖಲಿಸದೇ ಹಾಗೂ ಮೇಲಾಧಿಕಾರಿಗಳಿಗೂ ಮಾಹಿತಿ ತಿಳಿಸಿರುವುದಿಲ್ಲ. ಅದಲ್ಲದೆ, ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕೂಡ ಮಾಹಿತಿ ನೀಡದೇ ಹಾಗೂ ಸಂಬಂದಪಟ್ಟ ಠಾಣೆಗೆ ಸಿಬ್ಬಂದಿಯೊಂದಿಗೆ ಕಳುಹಿಸಿ ಕೋಡದೇ ಠಾಣಾ ಪ್ರಭಾರ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಹಾಗೂ ಕರ್ತವ್ಯ ಲೋಪ ಎಸಗಿರುತ್ತಾರೆ.

ಇದರಿಂದ ನ. 26ರಂದು ವಿಳಂಬವಾಗಿ ದೂರು ದಾಖಲಾದ ಕಾರಣ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಎಸ್ಸೈ ರಘುರಾಮ ಹೆಗ್ಡೆ ಅವರನ್ನು ನ. 29ರಂದು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಇದೀಗ ಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ತಿಳಿಸಿದ್ದಾರೆ.

Comments are closed.