ಕುಂದಾಪುರ: ಖಾಸಗಿ ಜಾಗದಲ್ಲಿ ವ್ಯಕ್ತಿಯೋರ್ವರ ತೋಟದಲ್ಲಿ ನಿರ್ಮಾಣವಾಗುತ್ತಿದ್ದ ಬಾವಿ ಕೆಲಸದ ಸಂದರ್ಭ ಮೇಲ್ಭಾಗದ ಮಣ್ಣು ಕುಸಿದು ಅಯ್ಯಪ್ಪ ಮಾಲಾಧಾರಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆ ಕುಂದಾಪುರದ ಆಲೂರು ಗ್ರಾಮಪಂಚಾಯತಿ ವ್ಯಾಪ್ತಿಯ ಹಳ್ಳಿ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಈ ದುರ್ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಗೋಪಾಲ ಮೊಗವೀರ)
ಇಲ್ಲಿಗೆ ಸ್ಥಳೀಯ ನಿವಾಸಿಯಾದ ಗೋಪಾಲ ಮೊಗವೀರ (31) ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡಿದ್ದು ಇತರೆ ಮೂರು ಮಂದಿ ಕೆಲಸಗಾರರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ವಿವರ: ಆಲೂರು ಗ್ರಾ.ಪಂ ವ್ಯಾಪ್ತಿಯ ಹಳ್ಳಿ ಎಂಬಲ್ಲಿನ ನಿವಾಸಿ ಸತೀಶ್ ಹೆಗ್ಡೆ ಎನ್ನುವರ ಮನೆಯ ಜಾಗದಲ್ಲಿ ಬ್ರಹತ್ ಬಾವಿಯೊಂದರ ಕೆಲಸ ಕೆಲವು ದಿನಗಳಿಂದ ನಡೆಯುತ್ತಿದ್ದು ಆ ಕೆಲಸಕ್ಕಾಗಿ ಐದಾರು ಮಂದಿ ಬಾವಿ ಕೆಲಸಗಾರರು ದುಡಿಯುತ್ತಿದ್ದರು. ಇಂದು ಬೆಳಿಗ್ಗೆಯೂ ಕೂಡ ಕೆಲಸ ಮಾಡುತ್ತಿದ್ದ ಸಂದರ್ಭ ಅಚಾನಕ್ ಆಗಿ ಬಾವಿ ಒಳಗಡೆ ಕೆಲಸ ಮಾಡುತ್ತಿದ್ದ ನಾಲ್ವರ ಮೇಲೆ ಮಣ್ಣು ಕುಸಿದಿದೆ. ಮಣ್ಣು ಕುಸಿದ ಪರಿಣಾಮ ಮೂವರು ಕೊಂಚ ಗಾಯಗಳಲ್ಲಿಯೇ ಪಾರಾಗಿದ್ದು ಗೋಪಾಲ್ ಮಾತ್ರ ಬಾವಿ ಕೆಳಸ್ತರದ ಕೆಸರಿನಲ್ಲಿ ಹೂತಿದ್ದಾರೆ. ಆ ಕ್ಷಣದಲ್ಲೇ ಗೋಪಾಲ್ ಮೇಲೆ ಬಾವಿ ಮೇಲ್ಭಾಗದ ಮಣ್ಣು ಕುಸಿದಿದ್ದು ಅವರ ರಕ್ಷಣೆ ಮಾಡ ಹೊರಟರೂ ಕೂಡ ಸಾಧ್ಯವಾಗಿರಲಿಲ್ಲ. ಕೂಡಲೇ ಗಾಯಾಳುಗಳನ್ನು ಸಮೀಪದ 108 ಆಂಬುಲೆನ್ಸ್ ಮೂಲಕ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಸರು, ಮಣ್ಣು-ಕಲ್ಲುಗಳ ನಡುವೆ ಗೋಪಾಲ ಮೃತದೇಹ ಸಿಲುಕಿಕೊಂಡಿದ್ದು ಸುಮಾರು ಮೂರ್ನಾಲ್ಕು ಗಂಟೆಕಾಲ 1 ಹಿಟಾಚಿ, 2 ಜೆಸಿಬಿ ಹಾಗೂ ಸ್ಥಳೀಯರ ಪರಿಶ್ರಮದಿಂದ ಶವವನ್ನು ಮೇಲಕ್ಕೆತ್ತಲಾಗಿತ್ತು.
ಇನ್ನು ಬಾವಿ ಕೆಲಸದ ವೇಳೆ ಬ್ಲ್ಯಾಸ್ಟಿಂಗ್ ಮಾಡಲಾಗಿದ್ದೇ ಈ ದುರ್ಘಟನೆ ಕಾರಣ ಎಂದು ಗೋಪಾಲ್ ಕುಟುಂಬಿಕರು ಹಾಗೂ ಸ್ಥಳೀಯರು ಆಕ್ರೋಷ ಹೊರಹಾಕಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಬಾವಿ ಕೆಲಸ ಮಾಡಿಕೊಂಡಿದ್ದ ಗೋಪಾಲ ಅವಿವಾಹಿತರಾಗಿದ್ದು ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಬಡ ಕುಟುಂಬದ ಗೋಪಾಲ್ ಮನೆ ನಿರ್ಮಾಣ ಮಾಡುತ್ತಿದು ಅದು ಕೂಡ ಸ್ಲಾಬ್ ಹಂತಕ್ಕೆ ಬಂದು ನಿಂತಿದೆ. ದುರಂತವೆಂದರೆ ಗೋಪಾಲ್ ನಿನ್ನೆಯಷ್ಟೇ ಅಯ್ಯಪ್ಪ ಮಾಲೆ ಧರಿಸಿದ್ದರು. ಅವರ ಜೊತೆ ಮಾಲೆ ಹಾಕಿದ್ದ ಸಹ ಮಾಲಾಧಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ಮರುಕ ವ್ಯಕ್ತಪಡಿಸಿದರು.
ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
Comments are closed.