ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಹಗರಣಗಳ ಕುರಿತು ರಾಜ್ಯ ಸರಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನಿಸಿದ್ದಾರೆ.
ಈ ಕುರಿತು ಅಧಿವೇಶನದಲ್ಲಿ ಮಾತನಾಡಿದ ಅವರು ಮಂಗಳೂರು ವಿವಿಯಲ್ಲಿ ಮೂರು ವರ್ಷಗಳಿಂದ ನಡೆದ ಹಗರಣಗಳು ಸರಕಾರದ ಗಮನಕ್ಕೆ ಬಂದಿದೆಯಾ ಎಂದು ಪ್ರಶ್ನೆ ಕೇಳಿದಾಗ ಗಮನಕ್ಕೆ ಬಂದಿಲ್ಲ ಎಂದು ಸರಕಾರ ಕಡೆಯಿಂದ ಉನ್ನತ ಶಿಕ್ಷಣ ಸಚಿವರು ಉತ್ತರ ನೀಡಿದ್ದಾರೆ.
ಮಂಗಳೂರು ವಿವಿಯಲ್ಲಿ ನಡೆದ ಹಗರಣಗಳ ಬಗ್ಗೆ ಪತ್ರಿಕೆ, ಟಿವಿ ಮಾಧ್ಯಮಗಳು ಸಾಕಷ್ಟು ವರದಿ ಮಾಡಿವೆ. ಇನ್ನು ಬೆಂಗಳೂರು ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ಕೂಡ ದಾಖಲೆಗಳೊಂದಿಗೆ ಮಾತನಾಡಿದ್ದಾರೆ. ಅದು ಕೂಡ ಮರುದಿನ ಮಾಧ್ಯಮಗಳಲ್ಲಿ ವರದಿಯಾಗಿದೆ. ತಾನು ಕೂಡ 13/7/2018 ರಂದು ಪತ್ರ ಮುಖೇನ ಮಾನ್ಯ ಸಚಿವರಿಗೆ ಮಾಹಿತಿ ನೀಡಿದ್ದೇನೆ. ಇಷ್ಟಾಗಿಯೂ ಗಮನಕ್ಕೆ ಬಂದಿಲ್ಲ ಎನ್ನುವ ಉತ್ತರ ಬಂದಿದೆ ಎಂದು ಶಾಸಕ ಕಾಮತ್ ಸಭಾಧ್ಯಕ್ಷರ ಗಮನಕ್ಕೆ ತಂದರು.
ಇನ್ನು ಮಂಗಳೂರು ವಿವಿಯಲ್ಲಿ ನಡೆದ ಹಗರಣಗಳ ಬಗ್ಗೆ ತಪ್ಪಿತಸ್ಥರ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದ ಪ್ರಶ್ನೆಗೆ ಮುದ್ರಣ ಮಾಧ್ಯಮದಲ್ಲಿ ವರದಿಯಾದಂತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ವರದಿ ಪಡೆಯಲಾಗಿದೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಬಂದಿದೆ. ಆದರೆ ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ದಾಖಲೆ ಸಮೇತ ಹೇಳಬೇಕು ಎಂದು ಶಾಸಕ ಕಾಮತ್ ಒತ್ತಾಯಿಸಿದರು.
ಇಂತಹ ವಿಚಾರಗಳಿಗೆ ಒಂದು ಸಮಯದ ಪರಿಧಿ ಹಾಕಿ ಸರಕಾರ ವಿಚಾರಣೆ ಮುಗಿಸಬೇಕು ಎಂದು ಸಭಾಧ್ಯಕ್ಷರು ಹೇಳಿದರು.
ಆ ಸಂದರ್ಭದಲ್ಲಿ ಕುಲಪತಿ ಆಗಿದ್ದವರು ಈಗ ನಿವೃತ್ತರಾಗಿದ್ದಾರೆ. ಆರೋಪಕ್ಕೆ ಒಳಗಾದವರು ಈಗ ಪದೋನ್ನತಿಗೊಂಡಿದ್ದಾರೆ ಎಂದು ಶಾಸಕ ಕಾಮತ್ ಅವರು ಹೇಳಿದಾಗ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡರು ಮೂರು ತಿಂಗಳೊಳಗೆ ಇದನ್ನು ವಿಚಾರಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
Comments are closed.