ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ವಿಶ್ವನಾಥ ಕೊರಗ ಶೆಟ್ಟಿಯ ಸಹಚರನನ್ನು ಬಂಧಿಸಿ ಆರೋಪಿ ಬಳಿ ಇದ್ದ ಪಿಸ್ತೂಲ್,ತಲವಾರು ಹಾಗೂ ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಹೊಯಿಗೆ ಬಝಾರ್ ನಿವಾಸಿ ಹೇಮಂತ್ ಕುಮಾರ್ ಯಾನೆ ಹೇಮು (47) ಎಂದು ಹೆಸರಿಸಲಾಗಿದೆ.
ಈ ಹಿಂದೆ ಅನೀಷ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಯೋರ್ವ ನಗರದ ಹೊಯಿಗೆ ಬಝಾರ್ ಪರಿಸರದಲ್ಲಿ ಯಾವುದೋ ಕೃತ್ಯ ನಡೆಸುವ ಉದ್ದೇಶದಿಂದ ತನ್ನ ವಶದಲ್ಲಿ ಅಕ್ರಮ ಶಸ್ತ್ರಾಸ್ತ್ರವಾದ ಪಿಸ್ತೂಲ್ ಹಾಗೂ ಸಜೀವ ಮದ್ದುಗುಂಡುಗಳು, ತಲವಾರುಗಳನ್ನು ಇಟ್ಟುಕೊಂಡಿದ್ದಾನೆ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಆತನ ವಶದಲ್ಲಿ ಅಕ್ರಮವಾಗಿ ಇರಿಸಿದ್ದ ಪಿಸ್ತೂಲ್ ಹಾಗೂ 4 ಸಜೀವ ಮದ್ದುಗುಂಡುಗಳು, 2 ತಲವಾರುಗಳು, ಚೂರಿ, ಬೇಸ್ ಬಾಲ್ ಸ್ಟಿಕ್ ಹಾಗೂ ಎರಡು ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಪಿಸ್ತೂಲ್ ನ ಮೌಲ್ಯ ರೂ. 1 ಲಕ್ಷ ಆಗಿರುತ್ತದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 1,12,750/- ಆಗಿರುತ್ತದೆ. ಆರೋಪಿಯು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ವಿಶ್ವನಾಥ ಕೊರಗ ಶೆಟ್ಟಿಯ ಸಹಚರನಾಗಿರುತ್ತಾನೆ. ಈತನು ಈ ಹಿಂದೆ ಮಂಗಳೂದು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕದ್ರಿ ಪಾರ್ಕ್ ಬಳಿ 2014 ನೇ ಇಸವಿಯಲ್ಲಿ ಅನೀಷ್ ಶೆಟ್ಟಿ ಎಂಬಾತನ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುತ್ತಾನೆ. ಈತನ ವಿರುದ್ಧ ಈ ಹಿಂದೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಪಿಸ್ತೂಲ್ ಹಾಗೂ ಇತರ ಮಾರಾಕಾಯುಧಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ( ಪಾಂಡೇಶ್ವರ) ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ನಗರದ ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್ ಐ.ಪಿ.ಎಸ್ ರವರ ನಿರ್ದೇಶನದಲ್ಲಿ ಪೊಲೀಸ್ ಉಪ ಆಯುಕ್ತರು( ಕಾ ಮತ್ತು ಸು) ರವರಾದ ಹನುಮಂತರಾಯ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಶ್ರೀಮತಿ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
Comments are closed.