ಮಂಗಳೂರು, ಡಿಸೆಂಬರ್. 21: ದ.ಕ. ಜಿಲ್ಲಾ ಕರಾವಳಿ ಉತ್ಸವದ ಉದ್ಘಾಟನೆ ಪ್ರಯುಕ್ತ ಶುಕ್ರವಾರ ಮಧ್ಯಾಹ್ನ ಮಂಗಳೂರು ಕೇಂದ್ರ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಹಮ್ಮಿಕೊಂಡಿದ್ದ ಬೃಹತ್ ಸಾಂಸ್ಕೃತಿಕ ಮೆರವಣಿಗೆಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಭಾಸ್ಕರ್ ಕೆ. ವಿಧ್ಯುಕ್ತವಾಗಿ ಚಾಲನೆ ನೀಡಿದರು.
ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್., ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಪಂ ಸಿಇಒ ಡಾ. ಎಡಿಸಿ ಕುಮಾರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಸೆಲ್ವಮಣಿ, ಮತ್ತು ಮೆರವಣಿಗೆ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮತ್ತಿತರರು ಉಪಸ್ಥಿತರಿದ್ದರು.
ನೆಹರೂ ಮೈದಾನದಿಂದ ಹೊರಟ ಮೆರವಣಿಗೆಯು ಎ.ಬಿ ಶೆಟ್ಟಿ ಸರ್ಕಲ್, ಗಡಿಯಾರ ಗೋಪುರ, ಯು.ಪಿ. ಮಲ್ಯ ರಸ್ತೆ, ಹಂಪನ್ ಕಟ್ಟೆ ವೃತ್ತ, ಕಾರ್ನಾಡ್ ಸದಾಶಿವ ರಾವ್ ರಸ್ತೆ (ಕೆ.ಎಸ್. ರಾವ್ ರೋಡ್), ಬಿಷಪ್ ಹೌಸ್, ಮಂಜೇಶ್ವರ ಗೋವಿಂದ ಪೈ ವೃತ್ತ (ನವಭಾರತ ಸರ್ಕಲ್), ಪಿ.ವಿ.ಎಸ್. ಜಂಕ್ಷನ್, ಮಹಾತ್ಮಾ ಗಾಂಧಿ ರಸ್ತೆ, ಬಳ್ಳಾಲ್‌ಬಾಗ್, ಲಾಲ್‌ಭಾಗ್ ಮೂಲಕ ಕರಾವಳಿ ಉತ್ಸವ ಮೈದಾನದಲ್ಲಿ ಸಂಪನ್ನಗೊಂಡಿತ್ತು.
ವಿವಿಧ ದೇವಾಲಯಗಳ ಸಹಭಾಗಿತ್ವದಲ್ಲಿ ಕರಾವಳಿಯ ಸಾಂಸ್ಕೃತಿಕ ಸಂಭ್ರಮದೊಂದಿಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳ ಪ್ರದರ್ಶನಗಳು, ನೃತ್ಯಗಳು, ಚೆಂಡೆ, ಡೋಲು ಇತ್ಯಾದಿಗಳನ್ನೊಳಗೊಂಡಿದ್ದು, ರಾಜ್ಯದ ಸುಮಾರು 80ಕ್ಕೂ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು.
ನೃತ್ಯಗಳು, ಚೆಂಡೆ, ಡೋಲು ವಿಶೇಷವಾಗಿ ಮಹಿಳಾ ವೀರಗಾಸೆ, ಚಿಕ್ಕ ಮಂಗಳೂರು, ಶಿವಮೊಗ್ಗದ ಡೊಳ್ಳು ಕುಣಿತ, ಸಾಗರದ ಕೋಲಾಟ, ಹಾವೇರಿಯ ಪುರವಂತಿಕೆ, ಧಾರವಾಡದ ಜಗ್ಗಲಿಗೆ ಮೇಳ, ಮಾಗಡಿಯ ಪಟ್ಟದ ಕುಣಿತ, ತುಮಕೂರಿನ ಸೋಮನ ಕುಣಿತ, ರಾಮನಗರದ ಪೂಜಾ ಕುಣಿತ, ಮೈಸೂರಿನ ವೀರ ಭದ್ರ ಕುಣಿತ, ಹಾವೇರಿಯ ಬೇಡರ ಕುಣಿತ, ಕಾರವಾರದ ಸುಗ್ಗಿ ಕುಣಿತ, ಮೈಸೂರಿನ ಕಂಸಾಳೆ, ನಗಾರಿ ತಂಡ, ರಾಯಚೂರಿನ ಕಣಿವಾದನ, ಚಾಮರಾಜನಗರದ ಗೊರವರ ಕುಣಿತ, ಬೆಳಗಾವಿಯ ಲಂಬಾಣಿ ನೃತ್ಯ, ಹಾಸನದ ಚಿಟ್ಟಿಮೇಳ, ಬದಿಯಡ್ಕದ ತ್ರಯಂಬಕಂ, ಕಾಸರಗೋಡಿನ ದುಡಿಇನದನ, ಮಾರ್ಗಂಕಳಿ, ತಿರುವಾದಿರೆಕ್ಕಳಿ ಮಡಿಕೇರಿಯ ಕೊಡವ ನೃತ್ಯ ತಂಡಗಳಲ್ಲದೆ. ಕನ್ನಡ ಭುವನೇಶ್ವರಿಯ ಟ್ಯಾಬ್ಲೊ ಮೊದಲ್ಗೊಂಡು ತುಳುನಾಡಿನ ಜನಪದ ಕುಣಿತ, ಯಕ್ಷಗಾನ ವೇಷಗಳು, ಸೋಣ ಜೋಗಿ ಕುಣಿತ ಹುಲಿವೇಷ, ತಾಲೀಮು, ಶಂಖ ದಾಸರು, ಜಾನಪದ ಗೊಂಬೆ, ಕೊರಗರ ಗಜಮೇಳ, ಮರಕಾಲು ಹುಲಿ ವೇಷ, ದಪ್ಪು ಕುಣಿತ, ಕಂಗೀಲು ನೃತ್ಯ, ಇತ್ಯಾದಿ ಅನೇಕಾನೇಕ ತಂಡಗಳು ಭಾಗವಹಿಸಿದ್ದವು.
ಬೆಡಿ ಗರ್ನಲ್, ಸಹಿತವಾಗಿ ವಿವಿಧ ದೇವಸ್ಥಾನಗಳಿಂದ ಸಾಂಪ್ರದಾಯಿಕ ವಾದನದೊಂದಿಗೆ ತಟ್ಟೀರಾಯ, ಬೇತಾಳ ಮೆರವಣಿಗೆಗೆ ಮೆರುಗು ನೀಡಿದವು.. ಅನೇಕ ವಿದ್ಯಾ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಎನ್‍ಸಿಸಿ, ಸ್ಕೌಟ್ಸ್ ಗೈಡ್ಸ್ ಭಾರತ ಸೇವಾದಲ, ಬ್ಯಾಂಕ್, ಅಂಚೆ ಇತ್ಯಾದಿ ಸಂಸ್ಥೆಗಳೂ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡಂತೆ ಸುಮಾರು ಐದು ಸಾವಿರ ವಿದ್ಯಾರ್ಥಿಗಳು ವಿವಿಧ ಸಾಮಾಜಿಕ ಚಿಂತನೆಗಳ ಅಭಿವ್ಯಕ್ತ ಪ್ರದರ್ಶನದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.
ವಿಶೇಷ ವ್ಯವಸ್ಥೆ : ಈ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಕ್ಕಳಿಗೆ, ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲಾ ಬಂಧುಗಳಿಗೆ ಉಪ್ಪಿಟ್ಟು, ಅವಲಕ್ಕಿ, ಬಾದಾಮಿ ಹಾಲು, ಲಾಡು, ಕಿತ್ತಲೆ, ಕುಡಿಯುವ ನೀರು , ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
Comments are closed.