ಮಂಗಳೂರು, ಡಿಸೆಂಬರ್.21: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಸಹಯೋಗದೊಂದಿಗೆ ಗಾಂಧೀಜಿಯವರ 150ನೇ ವರ್ಷಾಚರಣೆಯ ಸಂಭ್ರಮದಲ್ಲಿ ಇಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಸಭಾಂಗಣದಲ್ಲಿಂದು ಹಮ್ಮಿಕೊಂಡ ‘ಸ್ವರಾಜ್ ಮತ್ತು ಸರ್ವೋದಯ: ಒಂದು ಪುನರಾವಲೋಕನ’ ವಿಷಯದ ಬಗ್ಗೆ ಗಾಂಧಿನಗರ ಐ.ಐ.ಟಿ ಮತ್ತು ಅಮೆರಿಕಾದ ಮಿಚಿಗನ್ ಸ್ಟೇಟ್ ವಿಶ್ವ ವಿದ್ಯಾನಿಲಯದ ಸಂದರ್ಶಕ ಪ್ರೊಫೆಸರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಮೊಮ್ಮಗ ಪ್ರೊ. ರಾಜ್ ಮೋಹನ್ ಗಾಂಧಿ ಉಪನ್ಯಾಸ ನೀಡಿದರು.
ಗ್ರಾಮ ಸ್ವರಾಜ್ಯ ಗಾಂಧೀಜಿಯ ಪ್ರಮುಖ ಗುರಿಯಾಗಿತ್ತು. ಸಮಕಾಲೀನ ಭಾರತ ನಿರುದ್ಯೋಗ ಸೇರಿದಂತೆ ಹಲವು ಸಮಸ್ಯೆ ಗಳನ್ನೆದುರಿಸುತ್ತಿದೆ. ಇಂತಹ ಗ್ರಾಮೀಣ ಭಾರತಕ್ಕೆ ಮತ್ತೆ ಜೀವ ತುಂಬುವುದು ನಮ್ಮ ಮುಂದಿರುವ ಸವಾಲಾಗಿದೆ. ಈ ಸವಾಲನ್ನು ಪ್ರತಿಯೊಬ್ಬ ಭಾರತೀಯನು ಸ್ವೀಕರಿಸಿ ತಮ್ಮ ಕೊಡುಗೆಯನ್ನು ನೀಡಬೇಕಾಗಿದೆ.
ಗಾಂಧೀಜಿ ಎಲ್ಲರನ್ನೊಳಗೊಂಡ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟರು. ಅದೇ ಸರ್ವೋದಯದ ಮೂಲ ತತ್ವ. ಗ್ರಾಮ ಸ್ವರಾಜ್ಯವೆಂಬುದು ಇಂದು ಸಂಪೂರ್ಣ ನಗಣ್ಯವಾಗಿದ್ದು, ಅದನ್ನು ಮತ್ತೆ ಕಟ್ಟುವಂತಹ ಕೆಲಸ ಆಗಬೇಕು. ಗ್ರಾಮೀಣ ಭಾರತವನ್ನು ಮರಳಿ ಸಶಕ್ತಗೊಳಿಸುವುದು ಮತ್ತು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಮುಂದಿರುವ ಸವಾಲಾಗಿದೆ ಎಂದು ಅವರು ಹೇಳಿದರು.
ಗ್ರಾಮ ಸ್ವರಾಜ್ಯವನ್ನು ಗಾಂಧೀಜಿಯವರು ಹೇಳಿದ ರೀತಿಯಲ್ಲಿ ಮತ್ತೆ ಕಟ್ಟುವಂತಹ ಕೆಲಸ ಆಗಬೇಕು. ಸರ್ವೋದಯದಲ್ಲಿ ಅಭಿವೃದ್ಧಿ ಮುಖ್ಯ. ಆದರೆ ಅದು ಬರೀ ಮೇಲ್ವರ್ಗದವರ ಅಭಿವೃದ್ಧಿ ಮಾತ್ರವಲ್ಲ. ಅಲ್ಲಿ ಜಾತಿ ವರ್ಗೀಕರಣ ಇಲ್ಲ. ಭಾಷೆಯ ವರ್ಗೀಕರಣ ಇಲ್ಲ. ಮೇಲು-ಕೀಲು ಎಂಬ ಭೇದವಿಲ್ಲ. ಯಾರನ್ನೂ ಇದರಲ್ಲಿ ಬಿಡುವಂತಿಲ್ಲ. ಎಲ್ಲರನ್ನೊಳಗೊಂಡ ಅಭಿವೃದ್ಧಿಯೇ ಸರ್ವೋದಯದ ಮೂಲ ಮಂತ್ರವಾಗಿತ್ತು. ಆದರೆ ಇಂದು ಆ ತತ್ವಗಳಿಗೆ ಹಿನ್ನಡೆಯಾಗಿದೆ ಎಂದು ಅವರು ಹೇಳಿದರು.
ಸರ್ವೋದಯ ಎಂದರೆ ಕೇವಲ ಭಾರತಕ್ಕೆ ಸೀಮಿತವಾದ ಕಲ್ಪನೆಯಲ್ಲ. ಅದೇ ರೀತಿ ಗ್ರಾಮ ಸ್ವರಾಜ್ಯದಲ್ಲಿ ಪ್ರತಿಯೊಬ್ಬನೂ, ಅವನನ್ನು ಅವನೇ ಆಳ್ವಿಕೆ ಮಾಡುವ ಕಲ್ಪನೆಯಿದೆ. ಅಲ್ಲಿ ಯಾರೂ ಯಾರಿಂದಲೂ ಆಳ್ವಿಕೆ ಮಾಡುವಂತಿಲ್ಲ. ಗ್ರಾಮ ಸ್ವರಾಜ್ಯದ ಮೂಲ ತತ್ವವೇ ಸ್ವಾವಲಂಬನೆ. ಇಲ್ಲಿ ಸ್ವಾವಲಂಬಿ ಮನುಷ್ಯ, ಸ್ವಾವಲಂಬಿ ಗ್ರಾಮ, ಸ್ವಾವಲಂಬಿ ದೇಶ ಹೀಗೆ ಮುಂದುವರಿಯುತ್ತದೆ ಎಂದು ರಾಜ್ ಮೋಹನ ಗಾಂಧಿ ಹೇಳಿದರು.
ಮೋಹನ್ ದಾಸ್ ಕರಮಚಂದ ಗಾಂಧಿಯವರ ಜೊತೆಗಿನ ಒಡನಾಟದ ಬಗ್ಗೆ ಮತ್ತು ಕಸ್ತೂರ್ ಬಾ ಗಾಂಧಿವರ ಬಗ್ಗೆ ಸಭೀಕರು ಕೇಳಿದಾಗ ಕಸ್ತೂರ್ ಬಾ ಗಾಂಧಿ ಮಹತ್ವದ ಪಾತ್ರವಹಿಸಿದ್ದಾರೆ. ನಾನು ಹುಟ್ಟಿದಾಗ ನನ್ನ ತಾಯಿಯ ಜೊತೆ ಇದ್ದವರು ಕಸ್ತೂರ್ ಬಾ, ನಾನು 6 ವರ್ಷದವನಿರುವಾಗ ಅವರನ್ನು ಕಳೆದುಕೊಂಡೆ. ಗಾಂಧಿ ಮಹಾತ್ಮರಾಗುವಲ್ಲಿ ಕಸ್ತೂರ್ ಬಾ ಎಲ್ಲಾ ತಾಯಿಯರಂತೆ ತಮ್ಮ ಬದುಕಿನಲ್ಲಿ ಬಹಳಷ್ಟು ತ್ಯಾಗ ಮಾಡಿದ್ದಾರೆ, ಸಹಿಸಿದ್ದಾರೆ ಎಂದಾಗ ಒಂದು ಕ್ಷಣ ಬಾವೋದ್ವೆಗದಿಂದ ಕಣ್ಣೀರಿಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಭಾಂಗಣವನ್ನು ನೋಡಿ ತುಂಬಾ ಸಂತಸಪಟ್ಟಿರುವುದಾಗಿ ರಾಜ್ ಮೋಹನ್ ಗಾಂಧಿ ಹೇಳಿದರು. ಗಾಂಧೀಜಿಗೆ ಪ್ರೀಯವಾದ ವೈಷ್ಣವ ಜನತೋ…ಗೀತೆಯನ್ನು ಹಾಡಿದ ವಿದ್ಯಾರ್ಥಿನಿಯನ್ನು ಅವರು ಅಭಿನಂದಿಸಿದರು.
ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಎ.ಎಂ.ಖಾನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಇರ್ವತ್ತೂರು ಸ್ವಾಗತಿಸಿದರು. ಡಾ.ಲತಾ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ಡಾ. ಜಯವಂತ್ ನಾಯಕ್ ವಂದಿಸಿದರು.
Comments are closed.