ಮಂಗಳೂರು, ಫೆಬ್ರವರಿ.26: ಭಾರತೀಯ ವಾಯು ಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ಪ್ರವೇಶಿಸಿ ಏರ್ ಸ್ಟ್ರೈಕ್ ನಡೆಸಿರುವುದರ ಬಗ್ಗೆ ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ವೀರಪ್ಪ ಮೊಯ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳವಾರ ಮಂಗಳೂರಿಗೆ ಬಂದಿದ್ದ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಭಾರತೀಯ ವಾಯು ಸೇನೆಯ(ಐಎಎಫ್) 12 ಮಿರಾಜ್-2000 ಯುದ್ಧ ವಿಮಾನಗಳು ಮಂಗಳವಾರ ಬೆಳಗ್ಗಿನ ಜಾವ ಪಾಕಿಸ್ತಾನದ ಬಾಲಾಕೋಟ್ ಮೇಲೆ ದಾಳಿ ನಡೆಸಿ ಉಗ್ರಗ್ರಾಮಿಗಳ ತಾಣವನ್ನು ಛೇದಿಸಿರುವುದು ಸ್ವಾಗತಾರ್ಹ. ಆದರೆ ಯಾವುದೇ ರೀತಿಯ ಪ್ರತಿದಾಳಿಯನ್ನು ಎದುರಿಸಲು ನಾವು ಸದಾ ಸನ್ನದ್ಧರಾಗಿರಬೇಕು ಎಂದು ಹೇಳಿದ್ದಾರೆ.
ನಾವು ಯಾವತ್ತೂ ಯಾವುದೇ ರೀತಿಯಲ್ಲಿ ಮುಂದುವರಿಯುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇವೆ. ಆದರೆ ಪಾಕಿಸ್ತಾನಕ್ಕೆ ಆ ಭಾವನೆ ಇಲ್ಲ. ಹತಾಶ ಹಾಗೂ ಉಗ್ರಗಾಮಿಗಳ ತಾಣವನ್ನು ಹೊಂದಿರುವ ದೇಶ. ಅಂತಹ ದೇಶದ ಮೇಲೆ ದಾಳಿ ಮಾಡುವಾಗ ಸರ್ವ ರೀತಿಯ ಸಿದ್ಧತೆ ಮಾಡಿರುವ ವಿಶ್ವಾಸ ನಮಗಿದೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ. ವೈರಿಗಳನ್ನು ಸದೆಬಡಿಯುವ ಕೆಲಸ ಸರಕಾರದ್ದು ಎಂದು ವೀರಪ್ಪ ಮೊಯ್ಲಿ ಹೇಳಿದರು.
ಪುಲ್ವಾಮದಲ್ಲಿ ವೈರಿಗಳಿಂದ ನಮ್ಮ ನೆಲದಲ್ಲಿ ನಡೆದ ದಾಳಿ ದುರದೃಷ್ಟಕರ. ನಾವು ವೈರಿಗಳ ವಿಚಾರದಲ್ಲಿ ಯಾವತ್ತೂ ಎಚ್ಚರದಿಂದ ಇರಬೇಕು. ನೆರೆಹೊರೆಯಲ್ಲಿ, ಅದರಲ್ಲೂ ಗಡಿ ಪ್ರದೇಶಗಳಲ್ಲಿ ನಮ್ಮ ಶತ್ರುಗಳು ಇರುವಾಗ ಜಾಗೃತಾ ಮನೋಭೂಮಿಕೆಯನ್ನು ಸದಾ ಹೊಂದಿರಬೇಕು. ವೈರಿಗಳನ್ನು ಎದುರಿಸುವ ಶಕ್ತಿ ನಮ್ಮ ದೇಶದ ಜನರಲ್ಲಿದೆ. ಆಕಾಂಕ್ಷೆಯೂ ಇದೆ. ಪುಲ್ವಾಮದಲ್ಲಿ ನಡೆದ ಘಟನೆಯು ಗುಪ್ತಚರ ಮಾಹಿತಿ ನೀಡುವಲ್ಲಿ ವೈಫಲ್ಯವಾದ ಕಾರಣ ಸಂಭವಿಸಿದ್ದು. ಹಾಗಾಗಿ ಸದಾ ಎಚ್ಚರವಾಗಿರಬೇಕು ಎಂದು ಅವರು ಹೇಳಿದರು.
ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ಅಡಗುತಾಣಗಳ ಧ್ವಂಸ :
ಭಾರತೀಯ ವಾಯು ಸೇನೆಯ(ಐಎಎಫ್) 12 ಮಿರಾಜ್-2000 ಯುದ್ಧ ವಿಮಾನಗಳು ಮಂಗಳವಾರ ಬೆಳಗ್ಗಿನ ಜಾವ ಪಾಕಿಸ್ತಾನದ ಬಾಲಾಕೋಟ್ ಮೇಲೆ 1,000 ಕೆಜಿ ಬಾಂಬ್‌ಗಳನ್ನು ಸುರಿದ ಪರಿಣಾಮ ಸುಮಾರು 200 ಉಗ್ರರು ಹತರಾಗಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.
ಪಾಕ್ ಮೂಲದ ಜೆಇಎಂ ಉಗ್ರ ಸಂಘಟನೆ ಮತ್ತೊಂದು ಆತ್ಮಾಹುತಿ ದಾಳಿಗೆ ಪ್ರಯತ್ನಿಸುತ್ತಿದೆ ಎಂಬ ಗುಪ್ತಚರ ಮೂಲಗಳ ಮಾಹಿತಿಯ ಮೇರೆಗೆ ಐಎಎಫ್ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದೆ. ದಾಳಿಯಲ್ಲಿ ಮಸೂದ್ ಅಝರ್‌ನ ಭಾವ ವೌಲಾನ ಯೂಸುಫ್ ಅಝರ್ ಹತ್ಯೆಯಾಗಿದ್ದಾನೆಂದು ವರದಿಯಾಗಿದೆ.
Comments are closed.