ಕರಾವಳಿ

ಉಗ್ರರ ದಾಳಿಗೆ 1,000 ಕೆಜಿ ಬಾಂಬ್‌ಗಳ ಮೂಲಕ ಪ್ರತಿದಾಳಿ : ಮಂಗಳೂರಿನಲ್ಲಿ ಸಂಭ್ರಮಾಚರಣೆ

Pinterest LinkedIn Tumblr

ಮಂಗಳೂರು : ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯು ಸೇನೆಯ(ಐಎಎಫ್) 12 ಮಿರಾಜ್- 2000 ಯುದ್ಧ ವಿಮಾನಗಳು ಮಂಗಳವಾರ ಬೆಳಗ್ಗಿನ ಜಾವ ಪಾಕಿಸ್ತಾನದ ಬಾಲಾಕೋಟ್ ಮೇಲೆ 1,000 ಕೆಜಿ ಬಾಂಬ್‌ಗಳ ದಾಳಿ ನಡೆಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಮಂಗಳವಾರ ಮಂಗಳೂರಿನ ನಾಗರೀಕರು ಸಂಭ್ರಮಾಚರಣೆ ಮಾಡಿದರು.

ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು 1,000 ಕೆಜಿ ಬಾಂಬ್‌ಗಳನ್ನು ಮಂಗಳವಾರ ಮುಂಜಾನೆ ವಾಸ್ತವ ನಿಯಂತ್ರಣ ರೇಖೆ(ಎಲ್‌ಒಸಿ)ಯಾಚೆಗಿರುವ ಉಗ್ರರ ನೆಲೆಗಳ ಮೇಲೆ ಸುರಿದ ಹಿನ್ನೆಲೆಯಲ್ಲಿ ಮಂಗಳೂರಿನ ರಥಭೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗ ಪಟಾಕಿ ಸಿಡಿಸಿ ಸರ್ಜಿಕಲ್ ಸ್ಟ್ರೈಕ್ 2 ವಿಜಯೋತ್ಸವ ಆಚರಿಸಲಾಯಿತು.

ಇದೇ ವೇಳೆ ನಮ್ಮ ದೇಶದ ಸೈನಿಕರಿಗೆ ಮತ್ತಷ್ಟು ಶಕ್ತಿ ಸಾಮರ್ಥ್ಯ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿ ರಥಬೀದಿ ವೆಂಕಟರಮಣ ದೇವಸ್ಥಾನದಲ್ಲಿ ದೇಶಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಶ್ರೀರಾಮ ಸೇನೆ ಸಂಭ್ರಮಾಚರಣೆ:

ಭಾರತೀಯ ವಾಯು ಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ಪ್ರವೇಶಿಸಿ ಏರ್ ಸ್ಟ್ರೈಕ್ ನಡೆಸಿರುವುದಕ್ಕೆ ಶ್ರೀರಾಮ ಸೇನೆಯ ಮಂಗಳೂರು ಘಟಕದ ವತಿಯಿಂದ ನಗರದ ಮಲ್ಲಿಕಟ್ಟೆ ವೃತ್ತದ ಬಳಿ ಸಂಭ್ರಮಾಚರಣೆ ಮಾಡಲಾಯಿತು. ಈ ವೇಳೆ ಶ್ರೀರಾಮ ಸೇನಾ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.

Comments are closed.