ಕರಾವಳಿ

ಹೆಮ್ಮಾಡಿಯಲ್ಲಿ ಮೀನು ಮಾರುವ ಮಹಿಳೆ ನಿಗೂಢ ಸಾವು: ಸ್ಥಳೀಯರಿಂದ ಕೊಲೆ ಶಂಕೆ

Pinterest LinkedIn Tumblr

ಕುಂದಾಪುರ: ಮೀನು ಮಾರುವ ಕೆಲಸ ಮಾಡಿಕೊಂಡು ತನ್ನ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ 55 ವರ್ಷ ಪ್ರಾಯದ ಮಹಿಳೆ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದೊಂದು ಚಿನ್ನಾಭರಣಕ್ಕಾಗಿ ನಡೆದ ಕೊಲೆ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಕುಂದಾಪುರ ತಾಲೂಕು ಹೆಮ್ಮಾಡಿಯ ನಾವುಡರ ಅಂಗಡಿ ಎಂಬಲ್ಲಿ ಕೊಲ್ಲೂರು-ಹೆಮ್ಮಾಡಿ ರಾಜ್ಯ ಹೆದ್ದಾರಿ ಬಳಿಯೇ ಇರುವ ಮನೆಯಲ್ಲಿ ಈ ಘಟನೆ ನಡೆದಿದ್ದು ಇಲ್ಲಿನ ನಿವಾಸಿ ಗುಲಾಬಿ ಮೊಗವೀರ (55) ಎನ್ನುವ ವೃದ್ಧೆ ಮೃತರಾದವರು.

 

ಹೆಮ್ಮಾಡಿ ಪೇಟೆಯಲ್ಲಿ ಕಳೆದ ಎರಡು ದಶಕಗಳಿಂದಲೂ ಮೀನು ಮಾರಾಟ ಮಾಡಿಕೊಂಡಿದ್ದ ಗುಲಾಬಿ ಅವರ ಪತಿ ಮರಣದ ನಂತರ ಮನೆಯಲ್ಲಿ ಒಬ್ಬೊಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಇವರ ಇಬ್ಬರು ಗಂಡು ಮಕ್ಕಳು ಬೇರೆಡೆ ಉದ್ಯೋಗ ನಿಮಿತ್ತ ವಾಸವಿದ್ದರು. ನಿತ್ಯದಂತೆ ನಿನ್ನೆಯೂ ಮೀನು ಮಾರಾಟ ಮಾಡಿ ಸಂಜೆ ವೇಳೆ ಮನೆಗೆ ಹೋದ ಗುಲಾಬಿ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ವ್ಯಕ್ತಿಯೊಬ್ಬ ಮೀನು ಖರೀದಿಗೆ ತೆರಳಿದ್ದಾಗ ಗುಲಾಬಿಯವರು‌ ಮೃತದೇಹ ಮನೆಯೊಳಕ್ಕೆ ಕಂಡುಬಂದಿದ್ದು ಕೂಡಲೇ ಸ್ಥಳೀಯರು ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಮನೆಯೊಳಗೆ ಅಂಗಾತಲಾಗಿಬಬಿದ್ದ ಸ್ಥಿತಿಯಲ್ಲಿ ಪತ್ತೆಯಾದ ಗುಲಾಬಿ ಮೃತದೇಹವನ್ನು ಕಂಡ ಸ್ಥಳೀಯರು ಇದೊಂದು ಕೊಲೆ ಎಂಬುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಗುಲಾಬಿ ಮೈಮೇಲಿನ ಆಭರಣ ಇಲ್ಲದ ಹಿನ್ನೆಲೆ ಈ ಶಂಕೆಗೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಸಿಪಿಐ ಮಂಜಪ್ಪ, ಕುಂದಾಪುರ ಪಿಎಸ್ಐ ಹರೀಶ್ ಆರ್., ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ‌ ನಡೆಸಿ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ‌ನೀಡಿ ದಾಖಲೆ ಕಲೆಹಾಕಿದ್ದಾರೆ.

ಅನುಮಾನ ವ್ಯಕ್ತವಾದ ಹಿನ್ನೆಲೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದ್ದು ಅಲ್ಲಿನ ವರದಿ ಬಂದ ಬಳಿಕ ಇನ್ನಷ್ಟು ಸತ್ಯಾಸತ್ಯತೆಗಳು ಹೊರಬೀಳಲಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.