ಕರಾವಳಿ

ಆತ್ಮವಿಶ್ವಾಸದೊಂದಿಗೆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಯಶಸ್ಸು : ವೆಂಕಟರಮಣ ಗೊಸಾವಿ

Pinterest LinkedIn Tumblr

ಮಂಗಳೂರು: ಇಂದು ಜಗತ್ತು ಭಾರತದತ್ತ ನೋಡುವ ಸಮಯ ಬಂದಿದೆ. ಈಗಿನ ಪರಿಸ್ಥಿತಿಯಲ್ಲಿ ಮುಂದಿನ ಕೆಲವೇ ದಶಕಗಳಲ್ಲಿ ಭಾರತ ಜಗತ್ತಿನ ಆರ್ಥಿಕ ಶ್ರೇಷ್ಠತೆಯ ರಾಷ್ಟ್ರಗಳ ಸಾಲಿನಲ್ಲಿ ಮೂರನೇ ಸ್ಥಾನಕ್ಕೇರುವ ಎಲ್ಲ ಸಾಧ್ಯತೆಗಳು ಬಲವಾಗಿವೆ. ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯೋಗ್ಯ ಆಯ್ಕೆಗಳೊಂದಿಗೆ ಆತ್ಮವಿಶ್ವಾಸ ಮತ್ತು ಧೃತಿಗೆಡದೇ ಮುನ್ನಡೆಯುವ ಮನೋಭಾವದಿಂದ ಬೆಳೆಯುವತ್ತ ಯುವಜನತೆ ಗಮನಹರಿಸಬೇಕಾಗಿದೆ ಎಂದು ಇನ್ಫೋಸಿಸ್ ಫಿನಾಕಲ್‌ನ ಗ್ಲೋಬಲ್ ಸೇಲ್ಸ್ ಹೆಡ್ ಹಾಗೂ ಹಿರಿಯ ಉಪಾಧ್ಯಕ್ಷರಾಗಿರುವ ವೆಂಕಟರಮಣ ಗೊಸಾವಿ ಹೇಳಿದರು.

ಅವರು  ಇಲ್ಲಿನ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವ ಆಕೃತಿ – 2019 ಉದ್ಘಾಟಿಸಿ ಮಾತನಾಡಿದರು.

ನಿರಂತರ ಬದಲಾವಣೆಗಳಿಂದ ಸಾಧನೆ ಮತ್ತು ಸಾಧಕರಿಗೆ ಸವಾಲುಗಳು ಎದುರಾಗುತ್ತಲೇ ಇರುತ್ತವೆ ಎಂದ ಅವರು ಶಿಕ್ಷಣ ಸಂಸ್ಥೆಗಳ ಕೊಡುಗೆಗಳು ರಾಷ್ಟ್ರನಿರ್ಮಾಣಕ್ಕೆ ಪೂರಕವಾಗಿವೆ. ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆಗಳ ರಾಯಭಾರಿಗಳಾಗುವುದರ ಜತೆಗೆ ಹೆತ್ತವರಿಗೆ ಗೌರವ ತರುವಂತಹ ಸಾಧಕರಾಗಬೇಕು ಎಂದರು.

ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಅಧ್ಯಕ್ಷತೆವಹಿಸಿ ಮಾತನಾಡಿ ಜ್ಞಾನದ ಜತೆಗೆ ಬುದ್ಧಿಮತ್ತೆಯೂ ಮುಖ್ಯ. ಪರಿಪೂರ್ಣತೆಗೆ ಆದ್ಯತೆ ನೀಡಿ ಯಶಸ್ಸಿಗೆ ಶ್ರಮಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದರು. ಇದೇ ವೇಳೆ ಕಾಲೇಜಿನ ನೂತನ ಅಂತರ್ಜಾಲ ತಾಣವನ್ನು ಅವರು ಲೊಕಾರ್ಪಣೆಗೊಳಿಸಿದರು. ಶೈಕ್ಷಣಿಕ , ಕ್ರೀಡಾರಂಗದ ಪ್ರತಿಭಾನ್ವಿತರನ್ನು, ಸಾಧಕ ಹಳೆ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪಿ.ಹೆಚ್.ಡಿ. ಪದವಿ ಪಡೆದ ಡಾ. ರವೀಂದ್ರ ಮಲ್ಯ, ಡಾ. ಸುರೇಶ್ ಡಿ. ಅವರನ್ನು ಸಮ್ಮಾನಿಸಲಾಯಿತು.

ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ಗಣೇಶ್ ವಿ.ಭಟ್ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಸಿಂಧೂ ಭಟ್ ಶುಭ ಹಾರೈಸಿ ನೈಝಿಲ್ ಸ್ಕಾಟ್ ಅನಿಸಿಕೆ ಹಂಚಿಕೊಂಡರು. ಉದ್ಯಮಿ ಅಜಿತ್ ಕಾಮತ್, ಆಡಳಿತ ಮಂಡಳಿ ಕೋಶಾಧಿಕಾರಿ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಸದಸ್ಯರಾದ ಬಸ್ತಿ ಪುರುಷೋತ್ತಮ ಶೆಣೈ, ಎಂ.ಗಣೇಶ್ ಕಾಮತ್, ಎಂ.ಸುರೇಶ್ ಕಾಮತ್, ವಿದ್ಯಾರ್ಥಿ ಸಂಯೋಜಕ ಪವನ್ ವಿ.ಶೆಟ್ಟಿ ಉಪಸ್ಥಿತರಿದ್ದರು. ಆಕೃತಿ ಮುಖ್ಯ ಸಂಯೋಜಕ ಡಾ.ಎನ್.ಸತೀಶ್ ಕುಮಾರ್ ವಂದಿಸಿದರು.

ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥೆ ಡಾ. ರಾಜಲಕ್ಷ್ಮೀ ಸಾಮಗ ಅತಿಥಿಯವರನ್ನು ಪರಿಚಯಿಸಿದರು. ಉಪನ್ಯಾಸಕಿ ಆಶಿತಾ ಕೆ. ಬಹುಮಾನಿತರ ವಿವರ ನೀಡಿದರು. ಸಹ ಪ್ರಾಧ್ಯಾಪಕಿ ಮೇಧಾ ಸಾಧಕ ಹಳೆ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಸಹ ಪ್ರಾಧ್ಯಾಪಕಿ ಅಕ್ಷತಾ ಭಟ್ ಕಾರ್ಯಕ್ರಮ ನಿರೂಪಿಸಿದರು.

ಆಕೃತಿ ಉತ್ಸವದ ಅಂಗವಾಗಿ ವಿವಿಧ ತಾಂತ್ರಿಕ, ಸಾಂಸ್ಕೃತಿಕ ಸ್ಪರ್ಧಾಕೂಟಗಳು, ಅಟೋ ಎಕ್ಸ್‌ಪೊ ಸಹಿತ ಸಾಂಸ್ಕೃತಿಕ ವೈವಿಧ್ಯಗಳು ಜರಗಿದವು.

Comments are closed.