ಮಂಗಳೂರು, ಮಾರ್ಚ್.02: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಅಮೃತ್ ಯೋಜನೆಯಡಿ ಮಂಗಳೂರು ಕದ್ರಿ ಪಾರ್ಕ್ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಒಟ್ಟು ರೂ.1.16 ಕೋಟಿ ಅನುದಾನದಲ್ಲಿ ಕದ್ರಿ ಉದ್ಯಾನವನದಲ್ಲಿ ಹೊರಾಂಗಣ ಜಿಮ್ ಸಲಕರಣೆ, ವಾಕಿಂಗ್ ಟ್ರ್ಯಾಕ್ ಅಭಿವೃದ್ಧಿ, ದಿವ್ಯಾಂಗ ಮಕ್ಕಳ ಆಟದ ಸಲಕರಣೆ, ಅಲಂಕಾರಿಕಾ ತೋಟಗಾರಿಕಾ ಗಿಡಗಳಿಂದ ಅಲಂಕಾರ ಸೇರಿದಂತೆ ಕದ್ರಿ ಪಾರ್ಕಿನಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು, ಅಮೃತ ಯೋಜನೆಯನ್ನು ಮತ್ತು ಸ್ಮಾರ್ಟ್ ಸಿಟಿ ಎರಡನ್ನು ಪಡೆದಿರುವ ದೇಶದ ಮಹಾನಗರ ಪಾಲಿಕೆ ಮಂಗಳೂರು ಎನ್ನುವುದು ಸಂತಸದ ಸಂಗತಿಯಾಗಿದೆ. ದೇಶದ ಪ್ರಧಾನಿಯ ದೂರದೃಷ್ಟಿಯ ಫಲವಾಗಿ ಸ್ಮಾರ್ಟ್ ಸಿಟಿ ಯೋಜನೆ ಭವಿಷ್ಯದಲ್ಲಿ ಜನತೆಗೆ ಇನ್ನಷ್ಟು ಸಹಾಯವಾಗಲಿದೆ ಎಂದು ಹೇಳಿದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಕದ್ರಿ ಪಾರ್ಕ್‌ನ್ನು ಇನ್ನಷ್ಟು ವಿಸ್ತರಣೆ ಮಾಡುವುದರೊಂದಿಗೆ ಅದನ್ನು ಅಭಿವೃದ್ಧಿಪಡಿಸಲು ಸ್ಕೇಟಿಂಗ್ ಸರ್ಕಲ್ ಮತ್ತು ಪಾರ್ಕ್ ನಡುವೆ ಇರುವ ಹೆದ್ದಾರಿಯ ಕೆಳಗೆ ಸುರಂಗ ಮಾರ್ಗ್‌ವನ್ನು ಕೊರೆದು ಅಭಿವೃದ್ಧಿ ಪಡಿಸುವ ಯೋಜನೆಯ ಬಗ್ಗೆ ಚಿಂತನೆ ನಡೆಸಿರುವುದಾಗಿ ಹೇಳಿದರು.
ಮನಪಾ ಮೇಯರ್ ಭಾಸ್ಕರ್ ಅವರು ಮಾತನಾಡಿ, ಸರಕಾರದ ಯಾವೂದೇ ಯೋಜನೆಗಳನ್ನು ಉತ್ತಮ ವಾಗಿ ಅನುಷ್ಠಾನಗೊಳಿಸಿ ಜನರಿಗೆ ತಲುಪಿಸುವುದು ನಮ್ಮ ಹೊಣೆಗಾರಿಕೆ. ಅದರಲ್ಲಿ ನಾವು ಯಾರು ರಾಜಕೀಯ ಮಾಡಬಾರದು. ಕೇಂದ್ರ, ರಾಜ್ಯ ಸರಕಾರದ ಯೋಜನೆ ಎಂದು ವಿಭಾಗ ಮಾಡಬಾರದು ಯೋಜನೆಗಳನ್ನು ಜನರಿಗೆ ತಲುಪಿಸಲು ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂದು ಜನಪ್ರತಿನಿಧಿಗಳು ಭಾವಿಸಿ ಕಾರ್ಯನಿರ್ವಹಿಸಬೇಕು.
ಮಂಗಳೂರು ಮಹಾ ನಗರ ಪಾಲಿಕೆ ಈ ರೀತಿಯ ಸಂಪ್ರದಾಯದೊಂದಿಗೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಕದ್ರಿ ಪಾರ್ಕ್‌ನಲ್ಲಿ 23 ಜಿಮ್ ಸಲಕರಣೆಗಳನ್ನು ಪಾರ್ಕ್‌ಗೆ ಬರುವವರ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯೊಂದ ಅಳವಡಿಸಲಾಗಿದೆ. ಜೊತೆಗೆ ಒಟ್ಟು 116 ಲಕ್ಷ ರೂ.ಗಳ ವಿವಿಧ ಯೋಜನೆಗಳನ್ನು ಕದ್ರಿ ಪಾರ್ಕ್‌ನಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಪ್ರತಿಪಕ್ಷ ನಾಯಕರಾದ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ಗಳಾದ ಶ್ರೀಮತಿ.ರೂಪ ಡಿ. ಬಂಗೇರ, ಪ್ರವೀಣ್ಚಂದ್ರ ಆಳ್ವ, ರಾಧಾಕೃಷ್ಣ, .ನವೀನ್ ಡಿಸೋಜಾ, .ನಿವೇದಿತಾ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ .ಪೂಜಾ ಪೈ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ನಾಯಕ್, ಇಂಜಿನಿಯರ್ ರಂಗನಾಥ ನಾಯಕ್, ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.