ಕರಾವಳಿ

ಪುಲ್ವಾಮ ಘಟನೆಗೆ ಪ್ರತಿದಾಳಿ ಉಗ್ರರಿಗೆ ರಕ್ಷಣೆ ನೀಡುತ್ತಿರುವ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ – ಮಂಗಳೂರಿನಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್

Pinterest LinkedIn Tumblr

ಮಂಗಳೂರು, ಮಾರ್ಚ್. 09: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತ ವಿಶ್ವದ 6ನೇ ರಾಷ್ಟ್ರವಾಗಿದೆ. ಭಾರತವನ್ನು ಶಕ್ತಿ ಶಾಲಿ ರಾಷ್ಟ್ರವಾಗಿ, ತಂತ್ರಜ್ಞಾನ, ಆರ್ಥಿಕವಾಗಿ ಸಮೃದ್ಧ ರಾಷ್ಟ್ರವಾಗಿ ರೂಪಿಸುವುದು ಕೇಂದ್ರ ಸರಕಾರದ ನಿಲುವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಮಂಗಳೂರಿನ ಕೇಂದ್ರ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ದ.ಕ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಲೋಕಸಭಾ ಕೇಂದ್ರ ವ್ಯಾಪ್ತಿ ಶಕ್ತಿ ಕೇಂದ್ರಗಳ ಪ್ರತಿನಿಧಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಳೆದ ಐದು ವರ್ಷದಲ್ಲಿ ಮೂರು ಬಾರಿ ನಮ್ಮ ಗಡಿಯ ಹೊರ ಹೋಗಿ ಏರ್ ಸ್ಟ್ರೈಕ್ ಮಾಡಿದ್ದೇವೆ. ಉರಿಯಲ್ಲಿ ಮಲಗಿದ್ದ ನಮ್ಮ ಸೈನಿಕರನ್ನು ಉಗ್ರರು ಕೊಂದರು. ಪುಲ್ವಾಮಾದಲ್ಲಿ ಘಟನೆ ನಡೆದ ಬಳಿಕ ನಾವು ಮತ್ತೊಮ್ಮೆ ಏರ್ ಸ್ಟ್ರೈಕ್ ಮಾಡಿದೆವು. ಆದರೆ ಮೂರನೇ ಏರ್ ಸ್ಟ್ರೈಕ್ ಬಗ್ಗೆ ಯಾವುದೇ ಮಾಹಿತಿಯನ್ನು ನಾನು ನೀಡಲ್ಲ. ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ನಮಗೆ ತೊಂದರೆ ಕೊಡುವ ಅವರನ್ನು ಯಾವತ್ತೂ ಬಿಡುವುದಿಲ್ಲ ಎಂದು ಹೇಳಿದರು.

ಪುಲ್ವಾಮ ಘಟನೆಯ ಬಳಿಕ ಭಾರತ ತೆಗೆದುಕೊಂಡ ನಿಲುವಿಗೆ ವಿಶ್ವದಾದ್ಯಂತ ಭಾರತದ ಪರವಾದ ಬೆಂಬಲ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರದು ಈಗ ಐವತ್ತಾರು ಇಂಚಿನ ಎದೆಯಲ್ಲ. ಅವರದು ಈಗ 65 ಇಂಚಿನ ಎದೆ ಎಂಬುದು ಸಾಬೀತಾಗಿದೆ. ಭಾರತ ಸೇನೆ ಬಳಿಕ ನಡೆಸಿದ ವೈಮಾನಿಕ ದಾಳಿ ಭಯೋತ್ಪಾದಕರಿಗೆ ರಕ್ಷಣೆ ನೀಡುತ್ತಿರುವ ಪಾಕಿಸ್ತಾನಕ್ಕೆ ನೀಡಿದ ಎಚ್ಚರಿಕೆಯ ಸಂದೇಶ ವಾಗಿದೆ. ಪುಲ್ವಾಮ ಘಟನೆಯ ಬಳಿಕ ಭಾರತದ ನಿಲುವಿಗೆ ರಾಜತಾಂತ್ರಿಕ ಗೆಲುವು ಲಭಿಸಿದೆ. ಆದರೆ ವಿಪಕ್ಷಗಳು ದಾಳಿಯಲ್ಲಿ ಎಷ್ಟು ಜನ ಭಯೋತ್ಪಾದಕರು ಸತ್ತಿದ್ದಾರೆ ಎಂದು ಸಂಶಯ ವ್ಯಕ್ತಪಡಿಸುತ್ತಿವೆ ಎಂದು ಲೇವಾಡಿ ಮಾಡಿದರು.

ಭಾರತದ ವಾಯು ಸೇನೆಯ ಯೋಧರು ಯುದ್ಧ ವಿಮಾನಗಳ ಮೂಲಕ ಭಾರತದ ಗಡಿ ದಾಟಿ ಪಾಕಿಸ್ತಾನದೊಳಗೆ ನುಗ್ಗಿರುವುದು ಅಲ್ಲಿ ಪುಷ್ಪ ವೃಷ್ಟಿ ಗೆರೆಯಲು ಅಲ್ಲ. ಭಾರತದಲ್ಲಿ ಆತಂಕವಾದವನ್ನು ಸೃಷ್ಟಿ ಮಾಡುತ್ತಿರುವ ಭಯೋತ್ಫಾದಕರು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಬದ್ಧವಾಗಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಅಲ್ಲಿನ ಜನರ ರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದು ರಾಜ್‌ನಾಥ ಸಿಂಗ್ ತಿಳಿಸಿದರು.

ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ : ರಾಜ್‌ನಾಥ್ ಸಿಂಗ್

ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್‌ನ ಕಿಚಿಡಿ ಸರಕಾರವಿದೆ. ಇದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ರೈತರ ಸಾಲಮನ್ನಾದ ಭರವಸೆ ನೀಡಿರುವ ರಾಜ್ಯ ಸರಕಾರ ಅದನ್ನು ತ್ವರಿತವಾಗಿ ಈಡೇರಿಸುವಲ್ಲಿ ವಿಫಲವಾಗಿದೆ. ಸರಕಾರ ನುಡಿದಂತೆ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಿ ಲೋಕ ಸಭಾ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಪ್ರಧಾನಿ ಮೋದಿಗೆ ಶಕ್ತಿ ನೀಡಿ ಎಂದು ರಾಜ್‌ನಾಥ್ ಸಿಂಗ್ ಮನವಿ ಮಾಡಿದರು.

ಸಮಾರಂಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಬಿ.ಎಸ್. ರಾಘವೇಂದ್ರ, ಶಾಸಕರಾದ ಕೋಟಾ ಶ್ರೀನಿವಾಸ ಪೂಜಾರಿ, ವೇದವ್ಯಾಸ ಕಾಮತ್, ಅಂಗಾರ, ಸುನಿಲ್ ಕುಮಾರ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು, ಶಿವಮೊಗ್ಗ ಜಿಲ್ಲಾಧ್ಯಕ್ಷ ರುದ್ರೇಗೌಡ, ಚಿಕ್ಕ ಮಗಳೂರು ಜಿಲ್ಲಾಧ್ಯಕ್ಷ ಜೀವರಾಜ್, ಬಿಜೆಪಿ ವಿಭಾಗೀಯ ಮುಖಂಡ ಪ್ರತಾಪ್ ಸಿಂಹ ನಾಯಕ್, ದಕ್ಷಿಣ ಕನ್ನಡ ಲೋಕ ಸಭಾ ಪ್ರಚಾರ ಸಮಿತಿಯ ಸಂಚಾಲಕ ಗೊಪಾಲ ಕೃಷ್ಣ ಹೇರಳೆ, ರಾಜ್ಯ ಬಿಜೆಪಿ ಕಾರ್ಯದರ್ಶಿ ಅರುಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Comments are closed.