ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಜ.16ರ ಲೆಕ್ಕಾಚಾರದಂತೆ 16,97,417 ಮತದಾರರಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ 15,64,114 ಮತದಾರರು ಇದ್ದರು. ಜಿಲ್ಲೆಯಲ್ಲಿ ಕಳೆದ ಬಾರಿಗಿಂತ 1,33,303 ಮತದಾರರು ಹೆಚ್ಚಿದ್ದಾರೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯದ ಮತದಾರರ ಪಟ್ಟಿಯಲ್ಲಿ ಇರುವವರಲ್ಲಿ 21,292 ಮತದಾರರು 18ರಿಂದ 19 ವರ್ಷ ವಯಸ್ಸಿನ ಯುವ ಮತದಾರರು. ಪ್ರಸಕ್ತ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 1,861 ಮತಗಟ್ಟೆಗಳು (ಕಳೆದ ಬಾರಿ 1,790) ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಎ.18ರಂದು ನಡೆಯಲಿದ್ದು, ಸರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ, ಅಧಿಕಾರದಲ್ಲಿರುವ ಪಕ್ಷದ ಅವಕಾಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಚಿವರ ವೈಯಕ್ತಿಕ ಸಾಧನೆಗಳನ್ನು ಎತ್ತಿ ತೋರಿಸುವ ಅಥವಾ ಮೌಲ್ಯಮಾಪನ ಮಾಡುವಂತಹ ಏಕಪಕ್ಷೀಯ ಪ್ರಚಾರವನ್ನು ಸರಕಾರಿ ಇಲಾಖೆಗಳ ವಿವಿಧ ಅಧಿಕೃತ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾಡುವಂತಿಲ್ಲ.
ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆಗೆ ಅಡ್ಡಿಯಾಗುವ, ಧಕ್ಕೆ ತರುವ ಯಾವುದೇ ರೀತಿಯ ಸಂದರ್ಭ, ಪ್ರಕರಣಗಳಿಗೆ ಸಂಬಂಧಿಸಿ ನಾಗರಿಕರು ದೂರು ನೀಡಬಹುದು. ಇದಕ್ಕಾಗಿ ಚುನಾವಣಾ ಆಯೋಗ ಸಿ ವಿಜಿಲ್ (cVIGIL ) ಆಯಪ್ ಅನ್ನು ಅಭಿವೃದ್ಧಿಪಡಿಸಿದೆ. ನಾಗರಿಕರು ತಮ್ಮ ಎದುರು ನಡೆಯುವ ಇಂತಹ ಪ್ರಕರಣಗಳ ಫೋಟೋ ಅಥವಾ ವೀಡಿಯೊವನ್ನು ಈ ಆಯಪ್ ಮೂಲಕ ಕಳುಹಿಸಿ ದೂರು ನೀಡಬಹುದು ಎಂದು ಜಿಲಾಧಿಕಾರಿಗಳು ತಿಳಿಸಿದರು.
ಚುನಾವಣಾ ವೆಚ್ಚ ಮೇಲ್ವಿಚಾರಣೆಗಳ ಮೇಲಿನ ಸೂಚನೆಗಳ ಸಂಕಲನದಲ್ಲಿ ಸೂಚಿಸಿರುವಂತೆ, ಟಿವಿ ಚಾನೆಲ್‌ಗಳು/ ಕೇಬಲ್ ನೆಟ್‌ವರ್ಕ್‌ಗಳು, ಖಾಸಗಿ ಎಫ್‌ಎಂ ಚಾನೆಲ್‌ಗಳು ಸೇರಿದಂತೆ ರೇಡಿಯೋ, ಸಿನೆಮಾ ಮಂದಿರಗಳು, ಸಾರ್ವಜನಿಕ ಸ್ಥಳಗಳಲ್ಲಿನ ದೃಶ್ಯ-ಶ್ರಾವ್ಯ ಪ್ರದರ್ಶನಗಳು, ಸಾಮಾಜಿಕ ಜಾಲತಾಣಗಳು ಮತ್ತು ಪ್ರಚಾರದ ಸಂದರ್ಭ ರಾಜಕೀಯ ಕಾರ್ಯಕರ್ತರ ಸಾಮಾನ್ಯ ಚಲನವನಗಳ ಬಗ್ಗೆ ನಿಗಾ ಇರಿಸಲು ಚುನಾವಣೆ/ ಉಪಚುನಾವಣೆಗಳ ಘೋಷಣೆಯಾದ ತಕ್ಷಣದಿಂದ ರಾಜ್ಯ ಮತ್ತು ಜಿಲ್ಲಾ ಮೀಡಿಯಾ ಸರ್ಟಿಫಿಕೇಶನ್ ಮತ್ತು ಮಾನಿಟರಿಂಗ್ ಸಮಿತಿ (ಎಂಸಿಎಂಸಿ)ಯನ್ನು ನೇಮಕಗೊಳಿಸಲಾಗುತ್ತದೆ ಎಂದು ಜಿಲಾಧಿಕಾರಿಗಳು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.